ತೊನ್ನು ನಿವಾರಣೆ ಹೇಗೆ…? ಇಲ್ಲಿವೆ ನೋಡಿ ಕಾರಣ ಮತ್ತು ಸುಲಭ ಪರಿಹಾರಗಳು

ಈ ಸುದ್ದಿಯನ್ನು ಶೇರ್ ಮಾಡಿ

Tonnu

ವಿಟಿಲ್‍ಗೋ-ತೊನ್ನು, ಹಾಲ್ಚರ್ಮ, ಬಿಳಿ ಮಚ್ಚೆ ಎಂದು ಕರೆಯುತ್ತಾರೆ. ಚರ್ಮ ಅಥವಾ ಕೂದಲಿನ ಯಾವುದೆ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಶದ ಕೊರತೆಯಿಂದಾಗಿ ಬಿಳಿಯಾಗಿರುವ ಇಲ್ಲವೇ ಬಿಳಿ ಕಲೆಗಳಾಗಿರುವ ಸ್ಥಿತಿಯೇ ತೊನ್ನು.   ವಿಟಿಲ್‍ಗೋ ಅಥವಾ ತೊನ್ನು ಪ್ರಾಚೀನ ಕಾಲದಲ್ಲೇ ಕಂಡುಬಂದಿದೆ. ಬಹು ಪುರಾತನ ನಾಗರಿಕತೆ ಮತ್ತು ಧರ್ಮಗಳಲ್ಲೂ ಬಿಳಿ ಮಚ್ಚೆ ಬಗ್ಗೆ ಉಲ್ಲೇಖವಿದೆ. ಕ್ರಿ.ಪೂ.1400ರಲ್ಲಿ ಬರೆಯಲಾದ ಅಥರ್ವಣವೇದದಲ್ಲೂ ತೊನ್ನು ರೋಗವನ್ನು ಬಣ್ಣಿಸಲಾಗಿದೆ. ಮೊದಲ ಶತಮಾನದಲ್ಲಿ ರೋಮನ್ ವೈದ್ಯ ಅಲುಸ್ ಕಾರ್ನೆಲಿಯಸ್ ಸೆಲ್‍ಸುಸ್ ತನ್ನ ಪ್ರಾಚೀನ ವೈದ್ಯಕೀಯ ಪಠ್ಯ ಡಿ ಮೆಡಿಸಿನಾದಲ್ಲಿ ಇದಕ್ಕೆ ವಿಟಿಲ್‍ಗೋ ಎಂದು ಕರೆದಿದ್ದಾರೆ. ಕ್ರಿ.ಪೂ. 200ರಲ್ಲಿ ಮನುಸ್ಮೃತಿಯಲ್ಲಿ ತೊನ್ನು ರೋಗವನ್ನು ಶ್ವೇತ ಕುಷ್ಠ ಎಂದು ಬಣ್ಣಿಸಲಾಗಿದೆ. ಇದನ್ನು ಪೀಬಾಲ್ಡ್ ಸ್ಕಿನ್ ಹಾಗೂ ಅರ್ಜಿತ ಬಿಳಿಚರ್ಮ ಎಂದು ಕರೆಯಲಾಗುತ್ತದೆ.

ವಿಟಿಲ್‍ಗೋ-ತೊನ್ನು, ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯಲ್ಪಡುವ ತೊನ್ನಿಗೆ ಮೂಲ ಕಾರಣವೆಂದರೆ ಮೆಲನೊಸೈಟೆ ಎಂಬ ವರ್ಣದ್ರವ್ಯ.. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸುವ ಮೆಲನೊಸೈಟೆ ಕೋಶಗಳ ವರ್ಣದ್ರವ್ಯಗಳಲ್ಲಿ ನಷ್ಟದಿಂದಾಗಿ ಚರ್ಮವು ಬಿಳಿ ಬಣ್ಣಕ್ಕೆ ತಿರುಗುತ್ತದೆ.  ತೊನ್ನು ದೋಷದಲ್ಲಿ ಮೆಲನೊಸೈಟ್ ಕೋಶಗಳು ನಾಶವಾಗಿ ಚರ್ಮದ ಮೇಲೆ ಬಿಳಿ ಕಲೆಗಳನ್ನು ಉಳಿಸುತ್ತದೆ. ಈ ಸ್ಥಳದಲ್ಲಿ ಬೆಳೆಯುವ ಕೂದಲು ಕೂಡ ಇದರ ಪರಿಣಾಮಕ್ಕೆ ಒಳಗಾಗಿ ಬಿಳಿ ಬಣ್ಣಕ್ಕೆ ತಿರುಗುತ್ತದೆ. ತೊನ್ನು ಸಮಸ್ಯೆಯಲ್ಲಿ ಚರ್ಮವು ಹಾನಿಗೀಡಾಗುತ್ತದೆ. ತೊನ್ನು ರೋಗದಿಂದ ಬಳಲುತ್ತಿರುವ ಮಂದಿಯು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ.

ಮೆಲನೊಸೈಟೆ ಬಣ್ಣ ನೀಡುವ ಕೋಶವಾಗಿದ್ದು, ಚರ್ಮ, ಕೂದಲುಗಳು, ಶ್ಲೇಷ್ಮ ಪೊರೆ, ಕಣ್ಣುಗಳು, ಕಿವಿಗಳು ಮತ್ತು ಮೆದುಳಿನಲ್ಲಿ ಇರುತ್ತದೆ. ಮೆಲನೊಸೈಟೆಯು ಟೈರೋಸಿನ್ ಎಂಬ ಕೋಶವನ್ನು ಹಿಡಿದು ಮೆಲನಿನ್ ವರ್ಣ ದ್ರವ್ಯವಾಗಿ ಪರಿವರ್ತಿಸುತ್ತದೆ. ಒಂದು ಮೆಲನೊಸೈಟ್ ಮೆಲನಿನ್‍ಅನ್ನು 36 ಕೆರಾಟಿನೊಸೈಟ್ ಆಗಿ ವಿತರಿಸುತ್ತದೆ.

ಯೂಮೆಲನಿನ್ ಕಡು ಕಂದು ಬಣ್ಣವನ್ನು ಮತ್ತು ಫಿಯೋಮೆಲನಿನ್ ಕೆಂಪು ಮಿಶ್ರಿತ ಕಂದು ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ. ಯೂಮೆಲನಿನ್ ಮತ್ತು ಫಿಯೋಮೆಲನಿನ್‍ನ ವಿಭಿನ್ನ ಸಾಂದ್ರತೆಗಳು ಚರ್ಮಕ್ಕೆ ವಿಭಿನ್ನ ಬಣ್ಣವನ್ನು ನೀಡುತ್ತದೆ.   ನೀಗ್ರೋಗಳು ಹೆಚ್ಚು ಯೂಮೆಲನಿನ್ ಬಣ್ಣ ಹೊಂದಿದ್ದರೆ, ಕಕಷೇರಿಯನ್ನರು ಮತ್ತು ಮಂಗೋಲಿಯನ್ನರು ಹೆಚ್ಚು ಫಿಯೋಮೆಲನಿನ್ ಹೊಂದಿರುತ್ತಾರೆ. ಮೆಲನೊಸೈಟ್‍ಗಳ ನಷ್ಟವು ಮೆಲನಿನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ಚರ್ಮದಲ್ಲಿ ಮಾಸಲು ಕಲೆಗಳು ಅಥವಾ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ವಿಟಿಲ್‍ಗೋ ಅಥವಾ ತೊನ್ನು ಎಂದು ಕರೆಯುತ್ತಾರೆ.

ಕಾರಣಗಳು:

ತೊನ್ನು ಸಮಸ್ಯೆಗೆ ಅನೇಕ ಕಲ್ಪನೆಗಳ ಕಾರಣಗಳನ್ನು ನೀಡಲಾಗುತ್ತಿದ್ದರೂ, ಅಧ್ಯಯನಗಳು ಬಲವಾಗಿ ಪ್ರತಿಪಾದಿಸಿರುವಂತೆ ಈ ಸ್ಥಿತಿಗೆ ರೋಗ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಬದಲಾವಣೆಗಳೇ ಕಾರಣ. ತೊನ್ನು ಕಲೆಗಳು ಅಭಿವೃದ್ದಿಗೊಳ್ಳುವಲ್ಲಿ ವಂಶವಾಹಿ ಪ್ರಭಾವ ಹಾಗೂ ಪರಿಸರ ಅಂಶಗಳ ಪ್ರಮುಖ ಪಾತ್ರ ವಹಿಸಲಿವೆ. ಕೆಲವೊಮ್ಮೆ ತೊನ್ನು ಸಮಸ್ಯೆಯೊಂದಿಗೆ ಹಾಶಿಮೊಟೋಸ್ ಥೈರಾಯ್ಡಿಟಿಸ್, ಸ್ಕೆಲೆರೋಡೆರ್ಮಾ, ಸಂಧಿವಾತ, ಟೈಪ್ 1 ಡಯಾಬಿಟಿಸ್, ಸೊರಿಯಾಸಿಸ್, ಆಡಿಸನ್ಸ್ ರೋ ಮತ್ತು ಲುಪುಸ್ ಎರಿಥೆಮಟೊಸಸ್‍ನಂದ ಸ್ವಯಂ ಪ್ರತಿರಕ್ಷಣಾ ದೋಷ ಮತ್ತು ಉರಿಯೂತ ರೋಗಗಳೂ ಕಾಣಿಸಿಕೊಳ್ಳುತ್ತವೆ.

ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆ ಮತ್ತು ಭಾವನಾತ್ಮಕ ದೋಷದಿಂದ ನರಳುತ್ತಾರೆ. ಹಸು, ಎಮ್ಮೆ, ನಾಯಿ,ಬೆಕ್ಕು ಮತ್ತು ಹಂದಿಗಳಂಥ ಪ್ರಾಣಿಗಳಲ್ಲೂ ಬಿಳಿಚರ್ಮ ದೋಷವು ಕಂಡುಬರುತ್ತದೆ.

ಚಿಹ್ನೆ ಮತ್ತು ಲಕ್ಷಣಗಳು:

ವಿಟಿಲ್‍ಗೋ ರೋಗದ ಮುಖ್ಯ ಚಿಹ್ನೆ ಮತ್ತು ಲಕ್ಷಣಗಳೆಂದರೆ ಬಣ್ಣವಿಲ್ಲದ ಚರ್ಮದ ಪ್ರದೇಶಗಳಲ್ಲಿ ಮಾಸಲು ಅಥವಾ ಬಿಳಿ ಕಲೆಗಳು ಕಂಡುಬರುತ್ತವೆ. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಇರುವುದರಿಂದಾಗಿ ಚರ್ಮದ ಸಾಮಾನ್ಯ ಬಣ್ಣಕ್ಕೆ ಕಾರಣವಾಗುತ್ತದೆ. ಮೆಲನಿನ್ ಚರ್ಮಕ್ಕೆ ವರ್ಣವನ್ನು ನೀಡುತ್ತದೆ. ಚರ್ಮದ ಬಣ್ಣದ ಆಧಾರದ ಮೇಲೆ ಜನಸಂಖ್ಯೆಯನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವರುಗಳೆಂದರೆ ನಿಗ್ರೋಗಳು, ಮಂಗೋಲಿಯನ್ನರು ಮತ್ತು ಕಕಷೇಯನ್ನರು. ಯೂಮೆಲನಿನ್ ಮತ್ತು ಫಿಯೊಮೆಲನಿನ್ ಇರುವಿಕೆಯಿಂದಾಗಿ ಆಯಾ ಜನಾಂಗದ ವರ್ಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ವಿಟಿಲ್‍ಗೋವನ್ನು ಎರಡು ಉಪ ವಿಭಾಗಗಳಾಗಿ ವಿಂಗಡಿಸಬಹುದು.

ನಾನ್-ಸೆಗ್‍ಮೆಂಟಲ್ ವಿಟಿಲ್‍ಗೋ (ಎನ್‍ಎಸ್‍ವಿ) ಹಾಗೂ ಸೆಗ್‍ಮೆಂಟಲ್ ವಿಟಿಲ್‍ಗೋ (ಎಸ್‍ವಿ).  ನಾನ್-ಸೆಗ್‍ಮೆಂಟಲ್ ವಿಟಿಲ್‍ಗೋದಲ್ಲಿ ಸಾಮಾನ್ಯ ಬಣ್ಣ ಹೋಗಿರುವಿಕೆ ಸ್ಥಳದಲ್ಲಿ ಸಾಮಾನ್ಯವಾಗಿ ಕೆಲವು ಏಕರೂಪತೆ ಕಲೆಗಳು ಕಂಡುಬರುತ್ತವೆ. ಕಾಲಕ್ರಮೇಣ ಹೊಸ ಕಲೆಗಳು ಸಹ ಕಾಣಿಸಿಕೊಳ್ಳುತ್ತದೆ ಹಾಗೂ ದೇಹದ ದೊಡ್ಡ ಭಾಗದ ಮೇಲೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಗೋಚರಿಸುತ್ತದೆ. ಎಸ್‍ಎಸ್‍ವಿಯನ್ನು ಮತ್ತೆ ಈ ಕೆಳಗಿನಂತೆ ವಿಂಗಡಿಸಬಹುದು.

ಸಾಮಾನ್ಯ ಬಿಳಿಚರ್ಮ ಅಥವಾ ವಿಟಿಲ್‍ಗೊ ವಲ್ಗಾರಿಸ್:  ಇದೊಂದು ಸಾಮಾನ್ಯ ನಮೂನೆಯಾಗಿದ್ದು, ದೇಹದ ಎಲ್ಲ ಕಡೆ ಸ್ವಾಭಾವಿಕ ಬಣ್ಣ ಹೋದ ಪ್ರದೇಶದಲ್ಲಿ ಕಲೆಗಳು ಕಂಡುಬರುತ್ತವೆ.

ಸಾರ್ವತ್ರಿಕ ತೊನ್ನು:  ದೇಹದ ಬಹು ಭಾಗಗಳಲ್ಲಿ ವರ್ಣದ್ರವ್ಯ ಹರಣವಾಗಿರುತ್ತದೆ.

ಪೋಕಲ್ ವಿಟಿಲ್‍ಗೋ :   ಒಂದು ಸ್ಥಳದಲ್ಲಿ ಅಥವಾ ಕೆಲವು ಹರಡಿದ ಬಿಳಿ ಕಲೆಗಳು ಕಂಡುಬರುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಗೋಚರಿಸುತ್ತದೆ.

ಆಕ್ರೋಫೆಸಿಯಲ್ ವಿಟಿಲ್‍ಗೋ:  ಮುಖ, ಕೈಗಳು ಅಥವಾ ಪಾದದಲ್ಲಿ ಮಾತ್ರ ಬಿಳಿ ಕಲೆಗಳು ಕಂಡುಬರುತ್ತದೆ.

ಲಿಪ್-ಟಿಪ್ ವೆರೈಟಿ:  ಬಿಳಿ ಕಲೆಗಳು, ತುಟಿಗಳು ಹಾಗೂ ಬೆರಳುಗಳ ತುದಿಯಲ್ಲಿ ಮಾತ್ರ ಕಂಡುಬರುತ್ತದೆ.

ಸೆಗ್‍ಮೆಂಟಲ್ ವಿಟಿಲ್‍ಗೋ:  ಬೆನ್ನುಹುರಿಯಿಂದ ಬೆನ್ನಿನ ಆಳದೊಂದಿಗೆ ಇರುವ ಚರ್ಮದ ಪ್ರದೇಶದ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ತುಂಬಾ ಸ್ಥಿರವಾಗಿರುತ್ತದೆ. ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತದೆ.

ಚಿಕಿತ್ಸೆ:  ತೊನ್ನು ಸೋಂಕು ರೋಗವಲ್ಲ. ಕೆಲವರು ನಂಬಿರುವಂತೆ ಇದು ಹಿಂದಿನ ಜನ್ಮದ ಪಾಪದ ಫಲವೂ ಅಲ್ಲ. ತೊನ್ನು ಇರುವ ವ್ಯಕ್ತಿಗಳೊಂದಿಗೆ ಬೇರೆಯುವುದರಿಂದ ಅವರೊಂದಿಗೆ ಊಟ ಮಾಡುವುದರಿಂದ ರೋಗವು ಹರಡುವುದಿಲ್ಲ.   ತೊನ್ನು ರೋಗದ ಕಲೆಗಳು ಕೆಲವೊಮ್ಮೆ ತಾನಾಗಿಯೇ ಕಡಿಮೆಯಾಗುತ್ತದೆ. ರೋಗಿಗಳು ಕಲೆ ಇರುವ ಕಡೆ ಸ್ವಾಭಾವಿಕ ವರ್ಣ ಪಡೆಯಬಹುದು. ಅನೇಕ ಪ್ರಕರಣಗಳಲ್ಲಿ ಬಿಳಿ ಕಲೆಗಳು ಅನೇಕ ವರ್ಷಗಳ ಕಾಲ ಹಾಗೇ ಉಳಿದಿರುತ್ತವೆ. ಕಲೆಗಳು ದೇಹದ ಎಲ್ಲ ಭಾಗಗಳಿಗೂ ಹಬ್ಬಲು ಕಾರಣವಾಗಬಹುದು. ಆರು ತಿಂಗಳುಗಳಿಂದ ಎರಡರಿಂದ ನಾಲ್ಕು ವರ್ಷಗಳ ಕಾಲ ಚಿಕಿತ್ಸೆಯಿಂದ ಸ್ವಾಭಾವಿಕ ಬಣ್ಣವನ್ನು ಮತ್ತೆ ಪಡೆಯಲು ಸಾಧ್ಯವಿದೆ. ಕೆಲವೊಮ್ಮೆ ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದಿಲ್ಲ. ನಿವಾರಣೆ ಚಿಕಿತ್ಸೆಯ ಸಮಯ ಮತ್ತು ಚಿಕಿತ್ಸೆಯ ಸ್ವರೂಪವನ್ನು ತಕ್ಷಣಕ್ಕೆ ತಿಳಿಸುವುದು ಕಷ್ಟವಾಗುತ್ತದೆ.

ಸ್ಟಿರಾಯ್ಡ್‍ಗಳು, ಟ್ಯಾಕ್ರೋಲಿಮಸ್, ಸೋರಾಲೆನ್ಸ್‍ಗಳು ತೊನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕ್ರಮಬದ್ಧ ಸ್ಟಿರಾಯ್ಡ್‍ಗಳು ಮತ್ತು ಫೋಟೋಥೆರಪಿ ಸಹಕಾರಿಯಾಗುತ್ತದೆ. ವೈದ್ಯಕೀಯ ಚಿಕಿತ್ಸೆ ಪರಿಣಾಮಕಾರಿಯಲ್ಲದ ಪ್ರಕರಣಗಳಲ್ಲಿ ಸೌಂದರ್ಯ ಚಿಕಿತ್ಸೆ, ಕಲೆ ಮರೆಮಾಚುವ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ಪ್ರಯತ್ನಿಸಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin