ತ್ರಿಪುರಾ ಅಸೆಂಬ್ಲಿಯಲ್ಲಿ ಟಿಎಂಸಿ ಶಾಸಕನ ಹುಚ್ಚಾಟಕ್ಕೆ ಸದನ ಕಕ್ಕಾಬಿಕ್ಕಿ (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲ, ಡಿ.20-ವಿಧಾನಸಭೆಯ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತೃಣ ಮೂಲ ಕಾಂಗ್ರೆಸ್ ಶಾಸಕರೊಬ್ಬರು ಹಠಾತ್ ಸಭಾಧ್ಯಕ್ಷರ ಪೀಠದತ್ತ ಧಾವಿಸಿ ಅವರ ಮೇಜಿನ ಮೇಲಿದ್ದ ಲಾಂಛನವನ್ನು ಕಸಿದುಕೊಂಡು ಪರಾರಿಯಾದ ಪ್ರಸಂಗ ನಿನ್ನೆ ನಡೆದಿದೆ.  ವಿಧಾನಸಭೆಯ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರು ಆಡಳಿತಾರೂಢ ಸಿಪಿಐ(ಎಂ) ನಾಯಕರ ಸ್ತ್ರೀ ಲಂಪಟತನ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆಯಿತು. ವಿರೋಧ ಪಕ್ಷಗಳು ಸಭಾಧ್ಯಕ್ಷ ರಾಮೇಂದ್ರ ಚಂದ್ರ ದೇವನಾಥ್ ಪೀಠದ ಮುಂದೆ ಧಾವಿಸಿ ಅರಣ್ಯ ಸಚಿವ ನರೇಶ್ ಜಮಾತಿಯಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಆಗ ಟಿಎಂಸಿ ಸದಸ್ಯ ಸುದೀಪ್‍ರಾಯ್ ಬರ್ಮನ್ ಹಠಾತ್ ಸ್ಪೀಕರ್ ಪೀಠದತ್ತ ಧಾವಿಸಿ ಅವರ ಮೇಜಿನ ಮೇಲಿದ್ದ ಲಾಂಛನವನ್ನು ಕಸಿದು ಪರಾರಿಯಾದರು.

ಶಾಸಕನ ಈ ಹಠಾತ್ ವರ್ತನೆಯಿಂದ ಇಡೀ ಸದನ ಕೆಲ ಕಾಲ ಕಕ್ಕಾಬಿಕ್ಕಿಯಾಯಿತು.ಸದನದಲ್ಲಿದ್ದ ಮಾರ್ಷಲ್‍ಗಳು ಬರ್ಮನ್ ಬೆನ್ನಟ್ಟಿದರು. ಸದನದ ಹೊರಗೆ ಅವರನ್ನು ಹಿಡಿದ ಮಾರ್ಷಲ್‍ಗಳು ಲಾಂಛನ ಅವರಿಂದ ಪಡೆದು ಸದನಕ್ಕೆ ಹಿಂತಿರುಗಿದರು.  ಶಾಸಕ ಬರ್ಮನ್ ಹುಚ್ಚಾಟ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದು, ವೀಕ್ಷಕರಿಗೆ ಹಾಸ್ಯ ಸನ್ನಿವೇಶವಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin