ತ.ನಾಡು ಆರೋಗ್ಯ ಸಚಿವ ಮತ್ತು ನಟ ಶರತ್‍ಕುಮಾರ್ ಸೇರಿ ಅನೇಕರ ಮನೆಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Sharat-Kumar--01

ಚೆನ್ನೈ, ಏ.7- ಪ್ರತಿಷ್ಠಿತ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಮತದಾರರಿಗೆ ಹಣ ಹಂಚುತ್ತಿರುವ ಆರೋಪದ ಮೇಲೆ ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್, ಚಿತ್ರನಟ ಮತ್ತು ಎಐಎಸ್‍ಎಂಕೆ ನಾಯಕ ಶರತ್‍ಕುಮಾರ್ ಸೇರಿದಂತೆ ಅನೇಕ ರಾಜಕಾರಣಿಗಳು ಮತ್ತು ಗಣ್ಯರ ನಿವಾಸ ಮತ್ತು ಕಚೇರಿಗಳು ಒಳಗೊಂಡು 35ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಗ್ಗೆಯೇ ಆದಾಯ ತೆರಿಗೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಕಾರಾಗೃಹದಲ್ಲಿದ್ದುಕೊಂಡೇ ತಮಿಳುನಾಡು ಸರ್ಕಾರವನ್ನು ನಿಯಂತ್ರಿಸುತ್ತಿರುವ ಶಶಿಕಲಾ ನಟರಾಜನ್ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ. ಇದೇ ಏ.12ರಂದು ನಡೆಯುವ ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆಗಾಗಿ ಭಾರೀ ಪ್ರಮಾಣದ ಹಣದ ಹೊಳೆಯೇ ಹರಿಯುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕೈಗೊಂಡು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿನ್ನಮ್ಮರ ಪರಮಾಪ್ತ ಹಾಗೂ ಆರೋಗ್ಯ ಸಚಿವ ಡಾ.ವಿಜಯಭಾಸ್ಕರ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಅಲ್ಲದೆ, ಅಖಿಲ ಭಾರತ ಸಮತ್ವ ಮಕ್ಕಳ ಕಚ್ಚಿ (ಎಐಎಸ್‍ಎಂಕೆ) ಸಂಸ್ಥಾಪಕ ಮತ್ತು ನಟ ಶರತ್‍ಕುಮಾರ್, ಎಐಎಡಿಎಂಕೆ ಮಾಜಿ ಶಾಸಕ ಚಿಟ್ಲಪಕ್ಕಂ ರಾಜೇಂದ್ರನ್ ಮತ್ತು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಸ್.ಗೀತಾಲಕ್ಷ್ಮಿ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.

ನಟ ಶರತ್‍ಕುಮಾರ್ ನಿನ್ನೆ ಎಐಎಡಿಎಂಕೆ (ಅಮ್ಮ ಬಣ) ಅಭ್ಯರ್ಥಿ ಟಿ.ಟಿ.ವಿ.ದಿನಕರನ್ (ಶಶಿಕಲಾ ಸೋದರ ಸಂಬಂಧಿ) ಅವರನ್ನು ಆರ್.ಕೆ.ನಗರದಲ್ಲಿ ಭೇಟಿ ಮಾಡಿ ಬೆಂಬಲ ಸೂಚಿಸಿದ್ದರು. ಇದರ ಮರುದಿನವೇ ಐಟಿ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.  ಸಚಿವರು ಮತ್ತು ಅವರ ಸಂಬಂಧಿಕರ ಮೇಲೆ ಕಳೆದ ಕೆಲವು ದಿನಗಳಿಂದ ಐಟಿ ತೀವ್ರ ನಿಗಾ ವಹಿಸುತ್ತಿದೆ. ಮತದಾರರಿಗೆ ಹಣ ಹಂಚುವಲ್ಲಿ ವಿಜಯಭಾಸ್ಕರ್ ಅವರೇ ನೇರವಾಗಿ ಶಾಮೀಲಾದ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಐಟಿ ತನಿಖಾ ಘಟಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಐಟಿ ದಾಳಿಗೆ ಒಳಗಾದ ಮೊದಲ ಸಚಿವ ಡಾ.ವಿಜಯಭಾಸ್ಕರ್ ಆರ್‍ಕೆ ನಗರಕ್ಕೆ ಉಪಚುನಾವಣೆ ಘೋಷಣೆ ಆದಾಗಿನಿಂದ ಅವರ ವಿರುದ್ಧ ನಾಲ್ಕು ದೂರುಗಳು ದಾಖಲಾಗಿದ್ದವು.  ಚೆನ್ನೈ 19 ಸ್ಥಳಗಳು ಹಾಗೂ ತಿರುಚಿ ಮತ್ತು ಪ್ರದುಕೊಟ್ಟೈಯ 13 ಜಾಗಗಳಲ್ಲಿ ದಾಳಿ ನಡೆಸಿ ತೀವ್ರ ಶೋಧ ಕೈಗೊಳ್ಳಲಾಗಿದೆ.  ಸಚಿವರಿಗೆ ಸೇರಿದ ಕಲ್ಲು ಗಣಿಗಾರಿಕೆಗಳು, ಕಾಲೇಜುಗಳು ಮತ್ತು ಇತರ ವಾಣಿಜ್ಯ ಕಚೇರಿಗಳು ಹಾಗೂ ಅವರ ಬಂಧು-ಮಿತ್ರರ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮಗಳನ್ನು ಪತ್ತೆ ಮಾಡಲಾಗಿದೆ.  ಎಐಎಡಿಎಂಕೆ ಇಬ್ಭಾಗವಾದಾಗಿನಿಂದ ಶಶಿಕಲಾ ಪರಮಾಪ್ತರಾಗಿದ್ದ ಡಾ.ವಿಜಯಭಾಸ್ಕರ್ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin