ತ.ನಾಡು `ಕಾವೇರಿ’ ಕ್ಯಾತೆ : ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಆ.12- ಬೆಳೆ ನಷ್ಟ ಪರಿಹಾರ ನೀಡುವಂತೆ ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿರುವ ನೋಟಿಸ್ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಉಂಟಾಗಿರುವ ಮಳೆ ಕೊರತೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.  ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ಸಭೆ ನಡೆಯಲಿದ್ದು, ಜಲಸಂಪನ್ಮೂಲ ಇಲಾಖೆ, ಕಾನೂನು ಇಲಾಖೆಯ ಉನ್ನತಾಧಿಕಾರಿಗಳು, ಹವಮಾನ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಕಳೆದ 2012ರಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದರಿಂದ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ತಮಿಳುನಾಡಿಗೆ ನಿಗದಿ ಪಡಿಸಿದ ನೀರನ್ನು ಬಿಡಲು ಸಾಧ್ಯವಾಗಿರಲಿಲ್ಲ. ಇದರಿಂದ ತಮಿಳುನಾಡಿನಲ್ಲಿ ಬೆಳೆನಷ್ಟ ಉಂಟಾಗಿದ್ದು, 1200ಕೋಟಿ ರೂ. ಪರಿಹಾರವನ್ನು ಕರ್ನಾಟಕ ನೀಡುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ನ ಮೊರೆ ಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಂದೆ ರಾಜ್ಯ ಸರ್ಕಾರ ಯಾವ ಮಾರ್ಗ ಅನುಸರಿಸಬೇಕೆಂಬ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲೂ ಕೂಡ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ನಿಗದಿ ಪಡಿಸಿದ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲೂ ಕೂಡ ತಮಿಳುನಾಡು ತಕರಾರು ತೆಗೆದಿದ್ದು, ನೀರು ಬಿಡುವಂತೆ ಒತ್ತಾಯಿಸುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಕೊರತೆ ಹಾಗೂ ಮಳೆ ಅಭಾವವನ್ನು ನೀಗಿಸಲು ಕೃತಕ ಮಳೆ ತರಿಸುವ ಮೋಡಬಿತ್ತನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.  ಕೆಆರ್‍ಎಸ್ ಜಲಾಶಯದಲ್ಲಿ ಕೇವಲ 21 ಟಿಎಂಸಿ ನೀರಿದ್ದು, ಕುಡಿಯಲು ಮಾತ್ರ ಸಾಕಾಗಲಿದೆ. ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಸಾಕಷ್ಟು ನೀರು ಹರಿಸಲಾಗಿದೆ. ಜಲಾಶಯಗಳಲ್ಲಿ ನೀರಿಲ್ಲದಿರುವುದರಿಂದ ಸಂಕಷ್ಟ ಪರಿಸ್ಥಿತಿಯನ್ನು ಹಂಚಿಕೊಳ್ಳುವಂತೆ ತಮಿಳುನಾಡಿಗೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಹೇಮಾವತಿಯಲ್ಲಿ 16 ಟಿಎಂಸಿ ಅಡಿ, ಕಬನಿಯಲ್ಲಿ 5 ಟಿಎಂಸಿ ಹಾಗೂ ಕೆಆರ್‍ಎಸ್‍ನಲ್ಲಿ 28 ಟಿಎಂಸಿ ಅಡಿ ನೀರಿನ ಕೊರತೆ ಉಂಟಾಗಿದೆ. ಈಗಾಗಲೇ ಕೃಷಿಗೆ ನೀರು ಬಿಡದಂತೆ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತಳೆಯಬೇಕಾಗಿರುವ ಮುಂದಿನ ನಿಲುವಿನ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin