ಥಿಯೇಟರ್ ಗೆ ಎಂಟ್ರಿ ಕೊಟ್ಟ ‘ಕಿರಿಕ್ ಪಾರ್ಟಿ’

ಈ ಸುದ್ದಿಯನ್ನು ಶೇರ್ ಮಾಡಿ

Kirik-Party

ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನ ಸಿಂಪಲ್‍ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಮತೊಮ್ಮೆ ಸೌಂಡು ಮಾಡುತ್ತಿದ್ದಾರೆ. ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದ ರಕ್ಷಿತ್ ಶೆಟ್ಟಿ ನಂತರ ಉಳಿದವರು ಕಂಡಂತೆ ಚಿತ್ರದ ಮೂಲಕ ನಟ ಕಂ ನಿರ್ದೇಶಕನಾಗಿ ಪರಿಚಯವಾದರು. ವಾಸ್ತು ಪ್ರಕಾರ ಮತ್ತು ರಿಕ್ಕಿ ಚಿತ್ರಗಳಲ್ಲಿ ಮತ್ತೆ ನಾಯಕ ನಟನಾಗಿ ಕಂಡಿದ್ದ ರಕ್ಷಿತ್ ಶೆಟ್ಟಿ ಇದೀಗ ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಇದೇ ವಾರ ರಾಜ್ಯಾಧ್ಯಂತ ತೆರೆಕಾಣುತ್ತಿದೆ. ಇನ್ನು ಕಿರಿಕ್ ಪಾರ್ಟಿ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, ಈ ಚಿತ್ರದಲ್ಲಿ ಎಲ್ಲರ ಜೀವನದಲ್ಲಿ ಬರುವ, ತುಂಬಾ ಹಳೆಯದು ಎನಿಸಿದರೂ ಹೊಸದಾಗಿರುವಂತೆ ಕಾಣುವ ಕಿರಿಕ್‍ಗಳನ್ನೆ ತೆರೆಮೇಲೆ ತೆರೆದಿಡುತ್ತಿದ್ದೇವೆ. ಅದರಲ್ಲೂ ಕಾಲೇಜು ದಿನಗಳ ಎಲ್ಲ  ಕಿರಿಕ್‍ಗಳನ್ನು ತೆರೆ ಮೇಲೆ ಮೆಲುಕು ಹಾಕ್ತಿದ್ದೀವಿ ಎನ್ನುತ್ತದೆ. ಕಿರಿಕ್ ಪಾರ್ಟಿ ಚಿತ್ರಕಥೆಯನ್ನ ಸುಮಾರು ಐದಾರು ವರ್ಷಗಳ ಹಿಂದೆಯೇ ಬರೆದಿದ್ದ ರಕ್ಷಿತ್ ಶೆಟ್ಟಿ ಸೂಕ್ತ ಸಮಯದಲ್ಲಿ ಅದನ್ನು ತೆರೆಮೇಲೆ ತರುವ ಯೋಜನೆ ಹಾಕಿಕೊಂಡಿದ್ದರಂತೆ.

ಈಗ ಅಂತದ್ದೊಂದು ಸಮಯ ಕೂಡಿ ಬಂದಿದ್ದು, ತಾವು ಅಂದು ಬರೆದಿದ್ದ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ ಎನ್ನುತ್ತಾರೆ. ಮೊನ್ನೆ ನಡೆದ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ರಕ್ಷಿತ್ ಶೆಟ್ಟಿ, ವೃಷಬ್ ಶೆಟ್ಟಿ, ನಾಯಕಿಯರಾದ ಸಂಯುಕ್ತ, ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.  ಕಿರಿಕ್ ಪಾರ್ಟಿ ಚಿತ್ರದಲ್ಲಿ ವಿದ್ಯಾರ್ಥಿಗಳ ಕಾಲೇಜು ಜೀವನದಲ್ಲಿ ನಡೆಯುವ ಕಿರಿಕ್‍ಗಳನ್ನು ತೆರೆಮೇಲೆ ತರಲಾಗುತ್ತಿದೆ. ಈಹಿಂದೆ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಪ್ರೇಮಲೋಕ ಚಿತ್ರದಲ್ಲಿ ಕಾಲೇಜು ದಿನಗಳಲ್ಲಿ ನಡೆಯುವ ಘಟನಾವಳಿಗಳನ್ನು ಮೂರು ದಶಕಗಳ ಹಿಂದೆಯೇ ಕನ್ನಡ ಪ್ರೇಕ್ಷಕರಿಗೆ ತೋರಿಸಿದ್ದರು. ಕಿರಿಕ್ ಪಾರ್ಟಿ ಕೂಡಾ ಅಂತಹದ್ದೇ ಕಥೆ ಹೊಂದಿದ ಚಿತ್ರವಾಗಿದೆ.

ಇನ್ನು ಕಿರಿಕ್ ಪಾರ್ಟಿ ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು, ಅಜನೀಶ್ ಲೋಕನಾಥ್ ಚಿತ್ರದ ಹಾಡುಗಳಿಗೆ ಸಂಗೀತ. ಚಿತ್ರದ ಎಲ್ಲಾ ಹಾಡುಗಳಿಗೆ ರಕ್ಷಿತ್ ಶೆಟ್ಟಿ ಸಾಹಿತ್ಯದ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ರಿಲೀಸ್ ಆದ ಹಾಡುಗಳು ದಿನದಿಂದ ದಿನಕ್ಕೆ ಸಾವಿರಾರು ಹಿಟ್ಸ್ ಪಡೆದುಕೊಳ್ಳುತ್ತಿವೆ. ಹೊಸಬರೇ ಹೆಚ್ಚಾಗಿ ಇರೋ ಈ ಚಿತ್ರವನ್ನು ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋಸ್ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ . ಅಲ್ಲದೆ ಈ ಚಿತ್ರಕ್ಕೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಕೂಡ ಜಂಟಿಯಾಗಿ ಹೂಡಿಕೆ ಮಾಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin