ದಂಡ ಪಾವತಿಸದಿದ್ದರೆ ಕೆಎಸ್‍ಸಿಎ ಆಡಳಿತ ಮಂಡಳಿ ಕಚೇರಿಗೆ ಬೀಗ ಮುದ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೋಟಿ ಕೋಟಿ ಹಣ ಸಂಪಾದಿಸುವ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಜುಜುಬಿ 50 ಸಾವಿರ ದಂಡ ಪಾವತಿಸಲು ಹಿಂದೇಟು ಹಾಕುತ್ತಿರುವ ಕೆಎಸ್‍ಸಿಎಗೆ ಬಿಬಿಎಂಪಿ ಇನ್ನೆರಡು ದಿನಗಳಲ್ಲಿ ಬೀಗ ಮುದ್ರೆ ಹಾಕಲು ಮುಂದಾಗಿದೆ.

ಕಳೆದ ಭಾನುವಾರ ನಡೆದ ಭಾರತ ಹಾಗೂ ಆಸ್ಟ್ರೇಲಿಯ ನಿರ್ಣಾಯಕ ಪಂದ್ಯದ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಆರೋಪದಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಬಿಎಂಪಿಯಿಂದ 50 ಸಾವಿರ ದಂಡ ವಿಧಿಸಲಾಗಿತ್ತು.  ಕ್ರೀಡಾಂಗಣದ ಒಳಗಡೆ ಇದ್ದ ಕ್ಯಾಂಟೀನ್‍ಗಳಲ್ಲಿ ಪ್ಲಾಸ್ಟಿಕ್ ಕಪ್ ಬಳಕೆ ಆರೋಪದದ ಹಿನ್ನೆಲೆಯಲ್ಲಿ ಬಿಬಿಎಂಪಿ ಉಪ ಆರೊಗ್ಯಾಧಿಕಾರಿ ಸಂಗಮಿತ್ರ ಅವರು 50 ಸಾವಿರ ರೂ. ದಂಡ ವಿಧಿಸಿದ್ದರು.

ಆದರೆ ಇಲ್ಲಿಯವರೆಗೆ ದಂಡ ಪಾವತಿ ಮಾಡದೆ ಪಾಲಿಕೆಯ ನೋಟಿಸ್‍ಗೂ ಉತ್ತರ ನೀಡದೆ ಕೆಎಸ್‍ಸಿಎ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಡೋಂಟ್ ಕೇರ್ ಧೋರಣೆ ಅನುಸರಿಸುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಆದಾಯ ಗಳಿಸುವ ಕೆಎಸ್‍ಸಿಎ ಕನಿಷ್ಠ ದಂಡ ಪಾವತಿಸಲು ಮೀನಾಮೇಷ ಎಣಿಸುತ್ತಿರುವುದಕ್ಕೆ ಗರಂ ಆಗಿರುವ ಬಿಬಿಎಂಪಿ ಇನ್ನೆರಡು ದಿನಗಳಲ್ಲಿ ದಂಡ ಪಾವತಿಸದಿದ್ದರೆ ಕ್ರೀಡಾಂಗಣದ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಲು ನಿರ್ಧರಿಸಿ ಅಧಿಕಾರಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.

Facebook Comments