ದನಗಳ ಜಾತ್ರೆಗೆ ಭರದ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಪಾಂಡವಪುರ, ಜ.5- ಇದೇ ಫೆ.24ರಿಂದ ಆರಂಭವಾಗುವ ದನಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಜನ-ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಜತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸೂಚನೆ ನೀಡಿದರು.ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಅಧಿಕಾರಿ ವರ್ಗ ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದರು.ಜಾತ್ರೆ ಹಿನ್ನೆಲೆ ರಸ್ತೆ ದುರಸ್ತಿಗೊಳಿಸುವುದು, ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು. ಆಯಾಯಾ ಗ್ರಾಮದವರು ಸಭೆ ಸೇರಿ ಪೂಜಾ ವಿಧಿ-ವಿಧಾನಗಳ ಬಗ್ಗೆ ಚರ್ಚೆ ನಡೆಸಬೇಕು. ಜಾತ್ರೆ ಸಂಬಂಧ ಕರಪತ್ರ, ವ್ಯಾಪಕ ಪ್ರಚಾರ ನಡೆಸಲು ಕ್ರಮ ಕೈಗೊಳ್ಳುವಂತೆ ಇಒಗೆ ತಾಕೀತು ಮಾಡಿದರು.

ಜಾತ್ರೆಯಲ್ಲಿ ಸಿರಿಧಾನ್ಯಗಳ ಪ್ರದರ್ಶನ, ಕುಸ್ತಿ, ವಾಲಿಬಾಲ್, ಐದು ದಿನಗಳ ಸಾಂಸ್ಕೃತಿಕ  ಕಾರ್ಯಕ್ರಮ, ದೀಪ ವ್ಯವಸ್ಥೆ ಹಾಗೂ ಮಾ.1ರಂದು ಸಾಮೂಹಿಕ ವಿವಾಹಕ್ಕೆ ವಧು-ವರರ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರಲ್ಲದೇ, ಜಾತ್ರೆಗೆ 25 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಖರ್ಚಾಗಲಿದೆ. ಹೀಗಾಗಿ ಜಿ.ಪಂ ಸಿಇಒ 5ಲಕ್ಷ ಕೊಡಿಸಬೇಕು ಎಂದು ದೂರವಾಣಿ ಮೂಲಕ ಮನವಿ ಮಾಡಿಕೊಂಡ ಶಾಸಕರು, ಕಳೆದ ವರ್ಷ ಪ್ರಪ್ರಥಮ ಭಾರಿಗೆ ಸರ್ಕಾರದಿಂದ 3 ಲಕ್ಷ ರೂ. ಬಿಡುಗಡೆ ಮಾಡಿಸಿದ್ದೆ ಎಂದರು.ಕೃಷಿ ಇಲಾಖೆಯಿಂದ ವಿಶೇಷವಾಗಿ ಸಾವಯವ, ನೈಸರ್ಗಿಕ ಕೃಷಿ ಕುರಿತು ವಸ್ತುಪ್ರದರ್ಶನ ಆಯೋಜಿಸಬೇಕು. ತೋಟಗಾರಿಕೆ ಬೆಳೆಗಳ ವಸ್ತುಪ್ರದರ್ಶನ, ಶಿಕ್ಷಣ, ಪಶು, ಆರೋಗ್ಯ, ಮೀನುಗಾರಿಕೆ ಸೇರಿದಂತೆ ಇತರೆ ಇಲಾಖೆಯಿಂದಲೂ ವಸ್ತು ಪ್ರದರ್ಶನ ಏರ್ಪಡಿಸಬೇಕು.ಜಾತ್ರೆ ಮುಗಿಯವರೆಗೆ ಈ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ತಟ್ಟಸ್ಥಗೊಳಿಸಬೇಕು ಎಂದು ಪೊಲೀಸ್ ಇನ್ಸ್‍ಪೆಕ್ಟರ್‍ಗೆ ಸೂಚನೆ ನೀಡಿದರು.

ಬೇಬಿ ಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಪ್ರಾಕೃತಿಕ ಸಂಪತ್ತು ಸಂಪೂರ್ಣ ಹಾಳಾಗಿದೆ. ಗಣಿಗಾರಿಕೆ ಶಬ್ಧದಿಂದಾಗಿ ಮಠದ ಬಳಿಗೆ ಚಿರತೆಗಳು ಧಾವಿಸುತ್ತಿವೆ. ಹೀಗಾಗಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.ತಾ.ಪಂ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷ ಎಚ್.ಲಕ್ಷ್ಮಮ್ಮ, ಜಿ.ಪಂ ಸದಸ್ಯರಾದ ಎಚ್.ತ್ಯಾಗರಾಜು, ಅನುಸೂಯ, ಶಾಂತಲಾ, ಸಾಮಿಲ್ ತಿಮ್ಮೇಗೌಡ, ಕಾಂಗ್ರೆಸ್ ಮುಖಂಡರಾದ ಎಚ್.ಕೃಷ್ಣೇಗೌಡ, ಆರ್.ಎ.ನಾಗಣ್ಣ, ತಾಲೂಕು ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಹಸೀಲ್ದಾರ್ ಡಿ.ಹನುಮಂತರಾಯಪ್ಪಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin