ದಲಿತರ ಕುಂದು-ಕೊರತೆ ಸಭೆ ನಡೆಸಿ

ಈ ಸುದ್ದಿಯನ್ನು ಶೇರ್ ಮಾಡಿ

MADHUGIRI-3

ಮಧುಗಿರಿ, ಸೆ.23-ಅಧಿಕಾರಿಗಳು ಕಾನೂನಿನ ಪ್ರಕಾರ ಸಕಾಲದಲಿ ದಲಿತರ ಕುಂದು ಕೊರತೆ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಾಸಕ ಕೆ.ಎನ್.ರಾಜಣ್ಣ ತಾಕೀತು ಮಾಡಿದರು. ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಧುಗಿರಿ ಉಪ ವಿಭಾಗ ಮಟ್ಟದ ಪ.ಜಾತಿ ಮತ್ತು ಪ.ವರ್ಗದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ದಲಿತರ ಕುಂದು ಕೊರತೆ ಸಭೆಯಲಿ ಮಾತನಾಡಿದ ಅವರು, ದಲಿತರ ಕಷ್ಟ ಕಾರ್ಪಣ್ಯಗಳಿಗೆ ಅಧಿಕಾರಿಗಳು ಸ್ಪಂದಿಸುವ ಜೊತೆಗೆ, ಎಲ್ಲಾ ತಾಲೂಕುಗಳಲ್ಲೂ ದಲಿತರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಮುಂದಾಗಬೇಕು. ಒಂದು ವೇಳೆ ತಾಲೂಕು ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಉಪವಿಭಾಗ ಮಟ್ಟದ ಸಭೆಯಲ್ಲಿ ಚರ್ಚಿಸತಕ್ಕದ್ದು ಎಂದರು.

ಸಾಮಾಜಿಕ ಜೀವನದಲ್ಲಿಯೂ ಸಹ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಿ ಜ್ಞಾನಾರ್ಜನೆಯನ್ನು ಬಳಸಿ ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ದಲಿತ ಸಂಘಟಕರಿಗೆ ತಿಳಿಸಿದರು.ಡಿಸೆಂಬರ್ ಅಂತ್ಯದ ಒಳಗೆ ಕಾನೂನು ಚೌಕಟಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಕೊಡಿಸುವುದಾಗಿಯೂ, ಜೀತ ಮುಕ್ತರಿಗೆ ನಿವೇಶನ, ಮನೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸಿದ್ದತೆ ನಡೆದಿದ್ದು, ತಾಲೂಕನ್ನು ಗುಡಿಸಲು ಮುಕ್ತ ತಾಲೂಕನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದ್ದು, ಮುಂದಿನ ಮಾ.31ರೊಳಗೆ ಕಾರ್ಯರೂಪಕ್ಕೆ ಬರಲಿದೆ ಎಂದರು.

ಜಿಪಂ ಸದಸ್ಯ ಹೆಚ್.ಕೆಂಚಮಾರಯ್ಯ ಮಾತನಾಡಿ, ಸಮಸ್ಯೆಗಳನ್ನು ಹೊತ್ತು ಬಂದ ದಲಿತರಿಗೆ ಅಧಿಕಾರಿಗಳು ಸ್ಪಂದಿಸುವ ಅನಿವಾರ್ಯತೆ ಇದ್ದು, ಸೌಜನ್ಯದಿಂದ ವರ್ತಿಸುವುದು ಇಬ್ಬರ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.ಉಪವಿಭಾಗಾಧಿಕಾರಿ ಅನಿತಾಲಕ್ಷ್ಮೀ, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸೋಸೈಟಿ ರಾಮಣ್ಣ, ಸದಸ್ಯ ಜೆ.ಡಿ.ವೆಂಕಟೇಶ್, ಡಿವೈಎಎಸ್‍ಪಿ ಓ.ಬಿ.ಕಲ್ಲೇಶಪ್ಪ, ತಹಶೀಲ್ದಾರ್ ಜಿ.ಎಸ್.ಅನಂತರಾಮು, ಏಕೇಶ್‍ಬಾಬು, ಜಿಪಂ ಸದಸ್ಯರುಗಳಾದ ಗಾಯಿತ್ರಿಬಾಯಿ, ಬೊಮ್ಮಣ್ಣ, ದಲಿತ ಮುಖಂಡರಾದ ಬೆಲ್ಲದಮಡು ಕೃಷ್ಣಪ್ಪ, ಪುರಸಭಾ ಸದಸ್ಯ ಮಂಜುನಾಥ, ದಾಸಪ್ಪ, ಶಿರಾ ಲಕ್ಷ್ಮೀಕಾಂತ, ಕೊರಟಗೆರೆ ವೆಂಕಟೇಶ್‍ಮೂರ್ತಿ, ಮಾಗೋಡು ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin