ದಲೈಲಾಮಾ, ಪ್ರಮೋದಾ ದೇವಿ ಒಡೆಯರ್ ಅವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಮೈಸೂರು, ಡಿ.13- ದೇಶದ ವಿದ್ಯಾರ್ಥಿಗಳೆಲ್ಲ ಒಂದಾಗಬೇಕು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಕರೆ ನೀಡಿದರು.  ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿಂದು ಹಮ್ಮಿಕೊಂಡಿದ್ದ 97ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.
ದೇಶದ ಎಲ್ಲಾ ಕಲೆ, ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಬೆಳವಣಿಗೆ ಕಂಡುಬರುತ್ತಿದೆ. ಇದು ಒಳ್ಳೆಯದು. ಆದರೆ, ಇದರ ದುರ್ಬಳಕೆಯಾಗಬಾರದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತು ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲುವ ಪ್ರವೃತ್ತಿ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮವಾಗಿ ಬಾಳಬೇಕು, ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಹೇಳಿದರು.  ನನಗೆ ವಿದ್ಯಾರ್ಥಿಗಳನ್ನು ಕಂಡರೆ ಅಚ್ಚುಮೆಚ್ಚು. ಬಹಳಷ್ಟು ಕಡೆ ನಾನು ಹೋದಾಗ ಅವರನ್ನು ಮಾತನಾಡಿಸಿದರೆ ಅವರೆಲ್ಲ ತಾವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿದವರೆಂದು ಹೇಳಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಆಗಿನಿಂದ ನನಗೆ ಮೈಸೂರು ವಿವಿ ಬಗ್ಗೆ ಕುತೂಹಲ ಹಾಗೂ ಅಭಿಮಾನ ಮೂಡಿತ್ತು ಎಂದು ತಿಳಿಸಿದರು.

ಇದೇ ವಿಶ್ವವಿದ್ಯಾನಿಲಯ ನನ್ನನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದು ಅತ್ಯಂತ ಸಂತಸ ತಂದಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ನಾನು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದೇನೆ. ಆದರೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮೈಸೂರು ವಿವಿ ಉಪಕುಲಪತಿ ಪ್ರೊ .ಕೆ.ಎಸ್.ರಂಗಪ್ಪ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ, ರಂಗಪ್ಪನವರು ಈ ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಆಡಳಿತ ನಡೆಸಿ ವಿವಿಯ ಗೌರವವನ್ನು ಹೆಚ್ಚಿಸಿದ್ದಾರೆ. ಇನ್ನು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ವಿವಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ದಲೈಲಾಮಾ ಹಾರೈಸಿದರು.

ಘಟಿಕೋತ್ಸವದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ, ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ, ಉಪಕುಲಪತಿ ಕೆ.ಎಸ್.ರಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಅವರು ಪ್ರಮೋದಾದೇವಿ ಒಡೆಯರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದನ್ನು  ಕಣ್ತುಂಬಿಕೊಂಡರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin