ದಳಪತಿಯ ‘ದರ್ಬಾರ್’ ಶುರು

ಈ ಸುದ್ದಿಯನ್ನು ಶೇರ್ ಮಾಡಿ

dalapati-1
ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ದಳಪತಿಯ ಆರ್ಭಟ ಜೋರಾಗಲಿದೆ. ಈ ಹಿಂದೆ ರಾಧಿಕಾ ಪಂಡಿತ್ ಅಭಿನಯದ ಗಾನ ಬಜಾನ, ಲವ್ ಗುರು ಅಲ್ಲದೆ ಗಣೇಶ್ ಅಭಿನಯದ ಜೂಮ್ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದ ನಿರ್ದೇಶಕ ಪ್ರಶಾಂತ್ ರಾಜ್ ಈ ಬಾರಿ ಪಕ್ಕಾ ಆ್ಯಕ್ಷನ್ ಕಥಾಹಂದರವುಳ್ಳ ದಳಪತಿ ಎಂಬ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಕಲಾವಿದರ ಡೇಟ್ಸ್ ಸಮಸ್ಯೆ, ವಿಎಫ್‍ಎಕ್ಸ್ ಕೆಲಸ ಇಂಥ ಒಂದಷ್ಟು ತಾಂತ್ರಿಕ ಕಾರಣಗಳಿಂದ ಚಿತ್ರದ ಬಿಡುಗಡೆ ಸ್ವಲ್ಪ ತಡವಾಗಿತ್ತು. ಈಗ ಎಲ್ಲ ಕೆಲಸ ಮುಗಿದಿದ್ದು, ಇದೇ ವಾರ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.  ನಿರ್ದೇಶಕ ಪ್ರಶಾಂತ್‍ರಾಜ್ ಪ್ರತಿ ಬಾರಿಯೂ ವಿಭಿನ್ನ ಹಾಗೂ ಹೊಸತನದ ಕಥಾಹಂದರ ಹೆಣೆಯುವುದರಲ್ಲಿ ನಿಪುಣರು ಎಂಬುದು ತಿಳಿದೆ ಇದೆ. ಈ ಕಥೆಯನ್ನು ಬಹಳ ವರ್ಷಗಳಿಂದ ಸಿದ್ಧಪಡಿಸಿಕೊಂಡಿದ್ದು, ನಾಯಕ ಪ್ರೇಮ್ ಹಾಗೂ ನಾಯಕಿ ಕೃತಿ ಕರಬಂಧ ಅವರ ಡೇಟ್ಸ್ ಗಳ ಗೊಂದಲದ ನಡುವೆಯೂ ಅವರಿಗಾಗಿ ಕಾದಿದ್ದು, ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಸಾಮಾನ್ಯವಾಗಿ ಪ್ರೀತಿ-ಪ್ರೇಮದ ಕಥೆಯಲ್ಲಿ ನಾನಾ ರೀತಿಯ ತಿರುವುಗಳು ಇದ್ದೇ ಇರುತ್ತವೆ. ಅದಕ್ಕೆ ಹೊಂದಿಕೊಳ್ಳುವ ಹಾಗೆ ಕಥೆ ಹೆಣೆದಿದ್ದಾರಂತೆ. ಪ್ರತಿಯೊಬ್ಬ ಹುಡುಗಿಯೂ ನನಗೆ ಇಂಥಾ ಹುಡುಗನೇ ಸಿಗಬೇಕು, ಗಂಡ ಆಗಬೇಕೆಂದು ಆಸೆ ಪಡುತ್ತಾರೆ. ಅದರಂತೆ ಪ್ರತಿ ಹುಡುಗನಿಗೆ ಇದೇ ರೀತಿಯ ಹುಡುಗಿ, ಹೆಂಡತಿಯಾಗಿ ಸಿಗಬೇಕೆಂದು ಬಯಸುತ್ತಾರೆ. ಆ ನಿಟ್ಟಿನಲ್ಲಿ ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ.  ರಾಮಾಯಣ-ಮಹಾಭಾರತದ ಅಂಶಗಳನ್ನು ತೆಗೆದುಕೊಂಡು ಎಂ.ಎಸ್. ರಮೇಶ್ ಸಂಭಾಷಣೆ ಬರೆದಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆಯಂತೆ.

ಹಿರಿಯ ನಟ ಶರತ್ ಲೋಹಿತಾಶ್ವ, ಹಾಸ್ಯ ಕಲಾವಿದ ಚಿಕ್ಕಣ್ಣ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಪದ್ಮಜರಾವ್ ಕೂಡ ಚಿತ್ರದಲ್ಲಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ನಟ ನೆನಪಿರಲಿ ಪ್ರೇಮ್ ಒಬ್ಬ ಆ್ಯಕ್ಷನ್ ಹೀರೋ ಆಗಿ ಹೊರಮೊಮ್ಮುತ್ತಾರೆ. ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದು ಖಚಿತ ಎಂಬುದು ಚಿತ್ರತಂಡದ ಅಭಿಮತ. ಅದೇ ರೀತಿ ನಾಯಕಿ ಕೃತಿ ಕರಬಂಧಗೂ ಕೂಡ ಈ ಚಿತ್ರ ಬಹಳ ವಿಶೇಷವಾಗಿದ್ದು, ವೈದಿ ಎಂಬ ಪಾತ್ರದ ಮೂಲಕ ಜನರ ಮನಸ್ಸನ್ನು ಗೆಲ್ಲಲಿದ್ದಾರಂತೆ.  ಈ ಚಿತ್ರವು ರಾಜ್ಯಾದ್ಯಂತ ಈಗಾಗಲೇ ಅದ್ಧೂರಿ ಪ್ರಚಾರ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೈಲರ್ ಉತ್ತಮ ಪ್ರತಿಕ್ರಿಯೆ ಕೂಡ ಗಳಿಸಿಕೊಂಡಿದೆ. ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರವನ್ನು ನವೀನ್ ಫಿರೋಜ್‍ಖಾನ್ ನಿರ್ಮಾಣ ಮಾಡಿದ್ದಾರೆ. ಇನ್ನೇನಿದ್ದರೂ ಪ್ರೇಕ್ಷಕ ಪ್ರಭುಗಳು ಈ ದಳಪತಿಯನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin