ದಸರಾಗೆ ‘ಇದೊಳ್ಳೆ ರಾಮಾಯಣ’

ಈ ಸುದ್ದಿಯನ್ನು ಶೇರ್ ಮಾಡಿ

indolle

ನಾನು ನನ್ನ ಕನಸು, ಒಗ್ಗರಣೆ ಚಿತ್ರಗಳ ಮೂಲಕ ತಾನೊಬ್ಬ ಉತ್ತಮ ನಿರ್ದೇಶಕ ಎಂಬುದನ್ನು ಬಹುಭಾಷಾ ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್‍ರೈ ಅವರು ಈಗಾಗಲೇ ನಿರೂಪಿಸಿದ್ದಾರೆ. ಒಗ್ಗರಣೆ ಚಿತ್ರದ ನಂತರ ಮತ್ತೆ ನಿರ್ದೇಶನಕ್ಕೆ ಕೈ ಹಾಕಿರುವ ಪ್ರಕಾಶ್‍ರೈ ಅವರು ಇದೊಳ್ಳೆ ರಾಮಾಯಣ ಎಂಬ ವಿನೂತನ ಕಥೆ ಹಾಗೂ ನಿರೂಪಣೆ ಹೊಂದಿದ ಚಿತ್ರವನ್ನು ತೆರೆಗೆ ತರಲಿದ್ದಾರೆ. ಮಲಯಾಳಂನ ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಹಳ್ಳಿಯಲ್ಲಿ ನಡೆಯುವಂಥ ಕಥೆಯನ್ನು ಕಾಮಿಡಿ ಟಚ್‍ನೊಂದಿಗೆ ಹೇಳಲಾಗಿದೆ. ರಾಮನವಮಿ ಉತ್ಸವದ ಸಂದರ್ಭದಲ್ಲಿ ನಾಯಕ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಹಾಕಿಕೊಳ್ಳುತ್ತಾನೆ. ಆಗ ಆತನಲ್ಲಿರುವ ರಾಮ ಹಾಗೂ ರಾವಣ ಇಬ್ಬರ ಗುಣಗಳೂ ಪ್ರಕಟವಾಗುತ್ತವೆ. ಚಿತ್ರಕಥೆಗೆ ಅನುಗುಣವಾಗುವಂತೆ ಕೇವಲ ಒಂದೇ ಹಾಡನ್ನು ಚಿತ್ರದಲ್ಲಿ ಅಳವಡಿಸಲಾಗಿದೆ. ಸಾಂಕೇತಿಕವಾಗಿ ಆಡಿಯೋ ಬಿಡುಗಡೆ ಹಾಗೂ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಮೊನ್ನೆ ನಡೆಯಿತು.

ದಸರಾ ಹಬ್ಬದ ಕೊಡುಗೆಯಾಗಿ ಇದೊಳ್ಳೆ ರಾಮಾಯಣ ರಾಜ್ಯಾದ್ಯಂತ ತೆರೆಗೆ ಬರಲಿದೆ. ಹಿರಿಯ ಪತ್ರಕರ್ತರಾದ ಜೋಗಿ ಈ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ. ಅಲ್ಲದೆ ಮ್ಯೂಸಿಕ್ ಮಾಸ್ಟರ್ ಇಳಯರಾಜಾ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖವಾಗಿ ಐವರು ರಾಷ್ಟ್ರಪ್ರಶಸ್ತಿ ವಿಜೇತರು ಕೆಲಸ ಮಾಡಿದ್ದಾರೆ. ಚಿತ್ರದ ನಾಯಕನಾಗಿ ಪ್ರಕಾಶ್‍ರೈ, ನಾಯಕಿ ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳಯರಾಜಾ, ಕಲಾನಿರ್ದೇಶಕ ಶಶಿಧರ್ ಅಡಪ ಹಾಗೂ ಸಂಕಲನಕಾರ ಶ್ರೀಕರ ಪ್ರಸಾದ್ ಈ ಐದು ಜನ ರಾಷ್ಟ್ರ ಪ್ರಶಸ್ತಿ ವಿಜೇತರು ಒಂದೇ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವುದು ಇದೇ ಮೊದಲೆನ್ನಬಹುದು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿರ್ದೇಶಕ ಯೋಗರಾಜ ಭಟ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆಯಾದ ಡಾ.ವಿಜಯಮ್ಮ ಡಿ ಬೀಟ್ಸ್ ಪರವಾಗಿ ಶೈಲಜಾನಾಗ್, ಸಂಭಾಷಣೆಕಾರರಾದ ಜೋಗಿ ಅಲ್ಲದೆ ಈ ಚಿತ್ರವನ್ನು ರಾಜ್ಯಾದ್ಯಂತ ಹಂಚಿಕೆ ಮಾಡಲಿರುವ ಮೈಸೂರು ಟಾಕೀಸ್‍ನ ಜ್ಯಾಕ್ ಮಂಜು ಹಾಗೂ ಯೋಗಿ ದ್ವಾರಕೀಶ್ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ಹಾಗೂ ಒಂದು ಹಾಡು ಮತ್ತು ಜಾಕ್ ಮಂಜು ನೇತೃತ್ವದ ಮೈಸೂರು ಟಾಕೀಸ್ ಸಂಸ್ಥೆಯ ಬಗ್ಗೆ ಮಾಡಿದಂಥ ಸಾಕ್ಷ್ಯಚಿತ್ರವನ್ನು ಕೂಡ ಇದೇ ಸಮಯದಲ್ಲಿ ಪ್ರದರ್ಶಿಸಲಾಯಿತು.ನಾಯಕಿ ಪ್ರಿಯಾಮಣಿ, ನಟ ಅಚ್ಯುತಕುಮಾರ, ಸುಧಾಬೆಳವಾಡಿ ಡಿ ಬೀಟ್ಸ್‍ನ ಶೈಲಜಾನಾಗ್ ಚಿತ್ರದ ಬಗ್ಗೆ ಮಾತನಾಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin