ದಸರಾ ಉತ್ಸವಕ್ಕೆ ಸಿದ್ದಗಂಗಾ ಶ್ರೀ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

shivakumara--swamiji

ತುಮಕೂರು, ಅ.10- ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಜಿಲ್ಲಾ ದಸರಾ ಸಮಿತಿ ಆಯೋಜಿಸಿರುವ ಮೂರು ದಿನಗಳ ದಸರಾ ಉತ್ಸವಕ್ಕೆ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ರಾಜ್ಯ ಸರ್ಕಾರ ದಸರಾವನ್ನು ನಾಡಹಬ್ಬವಾಗಿ ಮೈಸೂರಿನಲ್ಲಿ ಆಚರಿಸುತ್ತಿದೆ.ಅದೇ ರೀತಿ ತುಮಕೂರಿನಲ್ಲಿ ಕಳೆದ 25 ವರ್ಷಗಳಿಂದ ದಸರಾ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ. ಇಂದು ಕರ್ನಾಟಕದ ಪರಿಸ್ಥಿತಿ ಚೆನ್ನಾಗಿಲ್ಲ. ಬರದಿಂದ ಮಳೆ, ಬೆಳೆ ಚೆನ್ನಾಗಿಲ್ಲ. ಉತ್ತರ ಭಾರತದಲ್ಲಿ ಮಳೆಯಿಂದ ಬೆಳೆ ಹಾಳಾದರೆ, ದಕ್ಷಿಣ ಭಾರತದಲ್ಲಿ ಮಳೆಯಿಲ್ಲದೆ ಬೆಳೆ ಹಾಕಿಲ್ಲ. ತಾಯಿ ಚಾಮುಂಡೇಶ್ವರಿ ಈಗಲಾದರೂ ಮಳೆ ಬರುವಂತೆ ಮಾಡಿ ನಮ್ಮ ಸಂಕಷ್ಟ ನೀಗಿಸಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ,ಸಂಪ್ರದಾಯಕ ದಸರಾ ಕಳೆದ 25 ವರ್ಷಗಳಿಂದ ನಡೆಯುತ್ತಿದ್ದು, ಇಂದು ಸಂಭ್ರಮದ ದಿನ. ದಸರಾಕ್ಕೆ ವಿಶೇಷ ಮಾನ್ಯತೆಯಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದು ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ವಿಜಯನಗರ ಕೃಷ್ಣದೇವರಾಯರು ಕುಳಿತ ರತ್ನಖಚಿತ ಸಿಂಹಾಸನ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಮಳೆ, ಬೆಳೆಗೆ ಪ್ರಾರ್ಥಿಸೋಣ, 1977ರಲ್ಲಿ ನೋಡಿದ ಬರ ಇಂದು ಕಾಣಿಸಿಕೊಂಡಿದೆ. ಕಾವೇರಿ ನಿರ್ವಹಣಾ ಮಂಡಳಿಗೆ ಸಹ ನಮ್ಮ ಸ್ಥಿತಿ ನೋಡಿ ಮರುಕ ಪಟ್ಟಿದ್ದಾರೆ.ಇದಕ್ಕೆ ಮಳೆಯೊಂದೇ ಪರಿಹಾರ. ದೇವಿ ಕರುಣಿಸಲಿ ಎಂಬುದು ನಮ್ಮ ಪ್ರಾರ್ಥನೆ ಎಂದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ದುಷ್ಟ ಶಕ್ತಿಗಳನ್ನು ಮಟ್ಟಹಾಕಿದ ದಿನ ದಸರಾ. ಇದು ನಮ್ಮ ನಾಡಹಬ್ಬ. ಇಡೀ ದೇಶವೇ ವಿವಿಧ ಹೆಸರಿನಲ್ಲಿ ದಸರಾ ಹಬ್ಬವನ್ನು ನವರಾತ್ರಿ, ದುರ್ಗಾಪೂಜೆ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಎಲ್ಲಾ ವರ್ಗದ ಸ್ವಾಮೀಜಿಗಳು ಸಹ ಪ್ರತಿ ವರ್ಷದ ಉತ್ಸವದ ಮೆರವಣಿಗೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ್ದಾರೆ. ಮಳೆ, ಬೆಳೆಯಿಲ್ಲದ ಪರಿತಪಿಸುತ್ತಿರುವ ಜನತೆಗೆ ಒಳ್ಳೆಯ ಮಳೆಯಾಗುವಂತೆ ದೇವರು ಕರುಣಿಸಲಿ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ,ಇಂದಿನ ಸಮಸ್ಯೆಗೆ ಮನುಷ್ಯನ ದುರಾಸೆಯೇ ಕಾರಣ. ದಸರಾ ಹಬ್ಬ ಧರ್ಮ ವಿಜಯದ ಸಂಕೇತ.ಆದಿಶಕ್ತಿಯ ಸ್ವರೂಪವಾಗಿರುವ ಲಕ್ಷ್ಮಿ, ಪಾವತಿ, ಸರಸ್ವತಿಯನ್ನು ಆರಾಧಿಸು ವುದೇ ದಸರಾ.ಮಾನವನಲ್ಲಿರುವ ರಾಕ್ಷಸ ಪ್ರವೃತ್ತಿ ತೊಲಗಿ, ಮನುಷ್ಯತ್ವ ಮೂಡಿಲಿ ಎಂದು ಹಾರೈಸೋಣ ಎಂದರು.ಕಾರ್ಯಕ್ರಮದಲ್ಲಿ ಮೇಯರ್ ಯಶೋಧ ಶ್ರೀನಿವಾಸ್ , ಪಾಲಿಕೆ ಸದಸ್ಯರಾದ ನಾಗರಾಜರಾವ್, ಕರುಣಾರಾಧ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜ್ಯೋತಿ ಗಣೇಶ್, ದಸರಾ ಸಮಿತಿಯ ಅಧ್ಯಕ್ಷ ಕೋರಿ ಮಂಜುನಾಥ್, ಗೆಳೆಯರ ಬಳಗದ ಗೋವಿಂದರಾಜು, ವೆಂಕಟನಂಜಪ್ಪ, ಸಿ.ವಿ.ಮಹದೇವಯ್ಯ, ಸುರೇಶ್ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin