ದಸರಾ ಹಬ್ಬದಂದು ರಾಜ್ಯದ ಜನತೆಗೆ ಸಿಎಂ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಸೆ.29-ದಸರಾ ಹಬ್ಬ ಎಂದೇ ಪರಿಗಣಿಸಲ್ಪಡುವ ಸಡಗರದ ಸಂಭ್ರಮದ ಶರನ್ನವರಾತ್ರಿಯ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.  ನವರಾತ್ರಿಯ ಹೆಸರಿನಲ್ಲಿ ನಡೆಯುವ ಹತ್ತು-ದಿನಗಳ ಸಂಭ್ರಮದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಯುದ್ಧಕ್ಕೆ ತೆರಳುವ ಮುನ್ನ ಮಹಾ ನವಮಿಯ ದಿನ ಪಾಂಡವರು ಆಯುಧಗಳನ್ನು ಪೂಜಿಸಿದರು ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ನಂತರ, ಇದು ರಾಜ-ಮಹಾರಾಜರ ಕಾಲದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಾಗಿ ಬೆಳೆಯಿತು. ಇದೀಗ ಕಾಲ ಬದಲಾದಂತೆ ಆಯುಧ ಪೂಜೆಯ ಶುಭದಿನವಾಗಿ ಶಸ್ತ್ರಾಸ್ತ್ರಗಳ ಬದಲಿಗೆ ನಮಗೆ ಬದುಕು ಕಟ್ಟಿ ಕೊಡುವ ಎಲ್ಲಾ ಉಪಕರಣಗಳನ್ನು, ಪರಿಕರಗಳನ್ನು ಹಾಗೂ ವಸ್ತುಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸುವ ಪದ್ಧತಿ ಹಾಗೂ ಪರಿಪಾಠ ಪ್ರಾರಂಭವಾಗಿದೆ.

ಶುಭ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಮುಹೂರ್ತಗಳನ್ನು ನೋಡುವ ನಂಬಿಕೆ ಹಲವರಲ್ಲಿದೆ. ಆದರೆ, ವಿಜಯ ದಶಮಿಯ ದಿನ ಇದಕ್ಕೆ ವಿನಾಯಿತಿ ಇದೆ ! ಮಕ್ಕಳ ಅಕ್ಷರಾಭ್ಯಾಸವಾಗಲೀ, ಕಟ್ಟಡಗಳ ಶಿಲಾನ್ಯಾಸವಾಗಲೀ, ನೂತನ ಮನೆಗಳ ಗೃಹ ಪ್ರವೇಶಕ್ಕಾಗಲೀ, ವ್ಯಾಪಾರ-ವಹಿವಾಟಿನ ಶುಭಾರಂಭಕ್ಕಾಗಲೀ ವಿಜಯ ದಶಮಿಯ ದಿನ ಸರ್ವಶ್ರೇಷ್ಠ ಎಂಬುದು ಬಹುಜನರ ವಿಶ್ವಾಸ.

ಈ ಎರಡೂ ಪ್ರಮುಖ ಹಬ್ಬಗಳ ಸುಸಂರ್ಭದಲ್ಲಿ ರಾಜ್ಯದ ಜನತೆಯಲ್ಲಿ ನನ್ನ ಮನವಿ ಒಂದೇ. ನಮ್ಮಲ್ಲಿ ಮೂಲ ನಂಬಿಕೆಗಳಿರಲಿ. ಮೂಢ ನಂಬಿಕೆಗಳು ಬೇಡ. ಉತ್ತಮ ಭವಿಷ್ಯಕ್ಕೆ ಶಿಕ್ಷಣವೇ ಅಸ್ತ್ರ ! ಉತ್ತಮ ಶಿಕ್ಷಣ ಪಡೆದವರಿಗೆ ಪ್ರತಿ ದಿನವೂ ವಿಜಯವೇ !! ಈ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳಿಗೂ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ, ಶಿಕ್ಷಣ ಕೊಡಿಸಿ, ಸುಶಿಕ್ಷಿತರನ್ನಾಗಿ ರೂಪಿಸಿ. ಇದೇ ತಮ್ಮಲ್ಲಿ ನನ್ನ ಕಳಕಳಿಯ ಮನವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin