ದಾಂಪತ್ಯ ಬೆಸುಗೆ ಯತ್ನ : ಪೆನ್ಸಿಲ್ ಮುರಿದು ಜೋಡಿಸುವಂತೆ ಸೂಚಿಸಿದ ನ್ಯಾಯಾಧೀಶ..!

ಈ ಸುದ್ದಿಯನ್ನು ಶೇರ್ ಮಾಡಿ

Cartoon--01

ಅಹಮದಾಬಾದ್, ಜ.28-ಗುಜರಾತ್ ಹೈಕೋರ್ಟ್‍ನಲ್ಲಿ ನಿನ್ನೆ ನಡೆದ ಭಾವನಾತ್ಮಕ ಪ್ರಸಂಗವೊಂದು ನ್ಯಾಯಾಲಯದ ಕೊಠಡಿಯಲ್ಲಿದ್ದವರಿಗೆ ಸೂಪರ್‍ಹಿಟ್ ಥ್ರೀ ಇಡಿಯಟ್ಸ್ ಹಿಂದಿ ಸಿನಿಮಾದ ಸನ್ನಿವೇಶ ನೆನಪಾಗುವಂತೆ ಮಾಡಿತು. ಆ ಚಿತ್ರದ ದೃಶ್ಯವೊಂದರಲ್ಲಿ ಪಾತ್ರಧಾರಿಯೊಬ್ಬ ಟೂತ್‍ಪೇಸ್ಟ್ ಟ್ಯೂಬನ್ನು ಹಿಂಡಿ ಪೇಸ್ಟನ್ನು ಮತ್ತೆ ಒಳಗೆ ಹಾಕುವಂತೆ ಗೆಳೆಯನಿಗೆ ತಿಳಿಸುತ್ತಾನೆ. ಅದು ಸಾಧ್ಯವಾಗುವುದಿಲ್ಲ ಎಂಬುದನ್ನು ತೋರಿಸುವ ದೃಶ್ಯವದು. ಅದೇ ಸಂದೇಶ ಸಾರಿದ ವಿದ್ಯಮಾನ ಉಚ್ಚ ನ್ಯಾಯಾಲಯದಲ್ಲಿ ನಡೆದಿದೆ. ಜಗಳವಾಡಿ ಕೋರ್ಟ್ ಮೆಟ್ಟಿಲು ಹತ್ತಿದ್ದ ದಂಪತಿಗೆ ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲ ಅವರು ಪೆನ್ಸಿಲನ್ನು ಮುರಿದು ಅದನ್ನು ಸರಿಯಾಗಿ ಮತ್ತೆ ಕೂಡಿಸುವಂತೆ ಸೂಚಿಸಿದರು. ಪೆನ್ಸಿಲ್ ಮತ್ತೆ ಸರಿಯಾಗಿ ಅಂಟಿಸಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿ ಒಮ್ಮೆ ಪ್ರತ್ಯೇಕವಾದರೆ ಸಂಬಂಧವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅರ್ಥಗರ್ಭಿತವಾಗಿ ಉದಾಹರಣೆ ಸಹಿತ ಹೇಳಿ ಕೋರ್ಟ್‍ನಲ್ಲಿದ್ದವರು ತಲೆದೂಗುವಂತೆ ಮಾಡಿದರು.

ತಮ್ಮ ಐದು ವರ್ಷದ ಮಗಳನ್ನು ಅಭಿರಕ್ಷೆಗೆ (ಕಸ್ಟಡಿ) ತೆಗೆದುಕೊಳ್ಳಲು ಕಿತ್ತಾಡಿಕೊಂಡಿದ್ದ ಈ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಪರ್ಡಿವಾಲ, ನಿಮ್ಮ ಕಿತ್ತಾಟ ಮತ್ತು ಪ್ರತ್ಯೇಕತೆಯು ಮಗುವಿನ ಮೇಲೆ ದುರಂತ ಪರಿಣಾಮ ಬೀರುತ್ತದೆ. ಹೀಗಾಗಿ ಹೆಣ್ಣು ಮಗುವಿನ ಉಜ್ವಲ ಭವಿಷ್ಯಕ್ಕಾಗಿ ನೀವು ಜಗಳವಾಡುವುದನ್ನು ಬಿಟ್ಟು ನೆಟ್ಟಗೆ ಸಂಸಾರ ಮಾಡಬೇಕೆಂದು ಸೂಚಿಸಿದರು. ನಿಮ್ಮ ಬಾಂಧವ್ಯಗಳ ಸುಧಾರಣೆಗೆ ಮರಳಿ ಯತ್ನವ ಮಾಡಿ. ಅದು ಹನ್ನೊಂದು ಬಾರಿಯಾದರೂ ಸರಿಯೇ ಎಂದು ಹೇಳಿದರು (ತನ್ನ ಪತ್ನಿಯೊಂದಿಗೆ ಆಪ್ತಸಮಾಲೋಚನೆಯಲ್ಲಿ ತಾನು 10 ಬಾರಿ ವಿಫಲನಾಗಿದ್ದೇನೆ ಎಂದು ಕೋರ್ಟ್‍ಗೆ ಪತಿರಾಯ ತಿಳಿಸಿದ್ದ).

ಈ ಪ್ರಕರಣದಲ್ಲಿ ಏರ್‍ಲೈನ್ ಕಂಪನಿಯ ಉದ್ಯೋಗಿ ಮಹಿಳೆ ಕೋರ್ಟ್ ಮೊರೆ ಹೋಗಿ ಮಗುವನ್ನು ನನ್ನ ಅಭಿರಕ್ಷೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ನನ್ನ ಗಂಡ ಕುಡುಕ ಹಾಗೂ ಜೂಜುಕೋರ. ಆತನಿಗೆ ಸಂಸಾರದ ಬಗ್ಗೆ ಜವಾಬ್ದಾರಿ ಇಲ್ಲ. ನಾನು ಆತನಿಂದ ರೋಸಿ ಹೋಗಿ ಪ್ರತ್ಯೇಕವಾಗಿರಲು ನಿರ್ಧರಿಸಿದೆ. ಆತ ಬಲವಂತವಾಗಿ ಮಗುವನ್ನು ನನ್ನಿಂದ ತೆಗೆದುಕೊಂಡಿದ್ದಾನೆ. ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಮಹಿಳೆ ಕೋರಿದ್ದರು. ನ್ಯಾಯಾಲಯ ಆತನಿಗೆ ಸಮನ್ಸ್ ಜಾರಿಗೊಳಿಸಿ ನಿನ್ನೆ ಕೋರ್ಟ್‍ಗೆ ಕರೆಸಿ ತರಾಟೆ ತೆಗೆದುಕೊಂಡಿತು.
ಮಗುವಿನ ಹಿತಾಸಕ್ತಿಗಾಗಿ ಸತಿ-ಪತಿ ಹೊಸ ಜೀವನ ಆರಂಭಿಸುವಂತೆ ಸಲಹೆ ಮಾಡುತ್ತಿದ್ದಾಗ ನ್ಯಾಯಾಧೀಶರ ಒಂದು ಹೇಳಿಕೆಗೆ ಕೋರ್ಟ್ ರೂಂನಲ್ಲಿದ್ದವರು ಗೊಳ್ ಎಂದು ನಕ್ಕಿದರು.

ಇದರಿಂದ ಕುಪಿತರಾದ ನ್ಯಾಯಮೂರ್ತಿ, ಈ ದಂಪತಿ ನ್ಯಾಯಾಧೀಶರ ಮುಂದೆ ಇದ್ದಾರೆ ಎಂಬ ಕಾರಣಕ್ಕಾಗಿ ನೀವೆಲ್ಲ ನಗುತ್ತಿದ್ದೀರಿ. ಆದರೆ, ಇಂಥ ಸನ್ನಿವೇಶಗಳು ಏಕೆ ಸೃಷ್ಟಿಯಾಗುತ್ತವೆ ಎಂಬ ಬಗ್ಗೆ ನಿಮ್ಮಲ್ಲಿ ಸ್ವಲ್ಪವೂ ಆಲೋಚನೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.  ಪತ್ನಿ ಮಾಡಿರುವ ಆರೋಪಗಳು ಮತ್ತು ಹಕ್ಕು ಪ್ರತಿಪಾದನೆಗಳಿಗೆ ಪ್ರತ್ಯುತ್ತರ ನೀಡುವಂತೆ ಪತಿಗೆ ಸೂಚಿಸಿರುವ ನ್ಯಾಯಾಧೀಶರು, ಜ.31ರಂದು ಮಗುವನ್ನು ನ್ಯಾಯಾಲಯಕ್ಕೆ ಕರೆತರುವಂತೆ ಮಹಿಳೆಗೆ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin