ದಾನದ ಹೆಸರಿನಲ್ಲಿ ಭಯೋತ್ಪಾದನೆಗೆ ದೇಣಿಗೆ ಸಂಗ್ರಹ : ಪಾಕ್ ಬಣ್ಣ ಬಯಲಿಗೆ ಭಾರತ ಪ್ರತಿತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Terrorism-01

ನವದೆಹಲಿ, ಅ.16-ಭಯೋತ್ಪಾದನೆ ಕುಮ್ಮಕ್ಕು ನೀಡುತ್ತಾ ಏಷ್ಯಾ ಪ್ರಾಂತ್ಯದಲ್ಲಿ ಆತಂಕ ಸೃಷ್ಟಿಸಿರುವ ಪಾಕಿಸ್ತಾನದ ದ್ವಿಮುಖ ನೀತಿಯ ರೂಪವನ್ನು ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಬಯಲು ಮಾಡಲು ಭಾರತ ಸಜ್ಜಾಗಿದೆ. ದಾನ-ಧರ್ಮದ ಹೆಸರಿನಲ್ಲಿ ಲಷ್ಕರ್-ಇ-ತೊಯ್ಬಾ ಸೇರಿದಂತೆ ಕೆಲವು ನಿಷೇಧಿತ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಭಾರತವು ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿ ಇಂದಿನಿಂದ ಆರಂಭವಾಗುವ ಭಯೋತ್ಪಾದನೆ ಮತ್ತು ಹಣಕಾಸು ನೆರವು ನಿಗ್ರಹ ಕುರಿತ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಂಪೂರ್ಣ ವಿವರ ನೀಡಲು ವೇದಿಕೆಯನ್ನು ಸಿದ್ಧಗೊಳಿಸಿದೆ.

ಪ್ಯಾರಿಸ್‍ನಲ್ಲಿ ಇಂದಿನಿಂದ ಒಂದು ವಾರ ಕಾಲ ನಡೆಯುವ ಭಯೋತ್ಪಾದನೆ ಹಣಕಾಸು ಸಹಾಯ ಮಟ್ಟ ಹಾಕುವ ಕುರಿತ ಸಮಾವೇಶದಲ್ಲಿ ಭಾರತ ಸೇರಿದಂತೆ 190 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್), ವಿಶ್ವಸಂಸ್ಥೆ, ಹಾಗೂ ಬಹುಪಕ್ಷೀಯ ಸಂಸ್ಥೆಯ ಸಂಸ್ಥೆಗಳ ಮುಖಂಡರು ಈ ಮಹತ್ವದ ಸಮಾವೇಶವನ್ನು ಸಾಕ್ಷೀಕರಿಸಲಿದ್ದಾರೆ.  ಈಗಾಗಲೇ ಐರೋಪ್ಯ ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದ ನಿಯೋಗ ಈ ಸಮಾವೇಶದಲ್ಲಿ ಭಾಗವಹಿಸಿ ಪಾಕಿಸ್ತಾನದ ನಿಜವಾದ ಬಣ್ಣವನ್ನು ಅನಾವರಣಗೊಳಿಸಲಿದೆ. ಲಷ್ಕರ್-ಇ-ತೊಯ್ಬಾ ಹಾಗೂ ವಿಶ್ವಸಂಸ್ಥೆ ಈಗಾಗಲೇ ಪಟ್ಟಿ ಮಾಡಿರುವ ಜಮಾಯತ್-ಉದ್-ದವಾ (ಜೆಯುಡಿ) ಮತ್ತು ಫಲ್ಹಾ-ಐ-ಇನ್ಸಾನಿಯತ್ ಫೌಂಡೇಷನ್ (ಎಫ್‍ಐಎಫ್) ಮೊದಲಾದ ನಿಷೇಧಿತ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ದಾನ-ಧರ್ಮದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಈ ನಿಯೋಗ ಬೆಳಕು ಚೆಲ್ಲಲ್ಲಿದೆ. ಅಲ್ಲದೇ, ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಹತನಾದ ಹಿಬ್‍ಬುಲ್ ಭಯೋತ್ಪಾದನೆ ಸಂಘಟನೆಯ ಕಮಾಂಡರ್ ಬುರ್‍ಹನ್ ವಾನಿ ಹೆಸರಿನಲ್ಲೂ ನಿಧಿ ಕ್ರೋಢೀಕರಿಸುತ್ತಿರುವ ಬಗ್ಗೆಯೂ ಗಮನಸೆಳೆಯಲಿದ್ದು, ಪಾಕ್‍ಗೆ ಇನ್ನೊಮ್ಮೆ ಭಾರೀ ಮುಖಭಂಗವಾಗಲಿದೆ.

ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಸಂಘಟನೆಗಳನ್ನು ಮಟ್ಟ ಹಾಕುವಂತೆ ಅಂತಾರಾಷ್ಟ್ರೀಯ ಒತ್ತಡಗಳ ಹಿನ್ನೆಲೆಯಲ್ಲಿ ತಾನು ಹಲವಾರು ಕ್ರಮಗಳನ್ನು ಕೈಗೊಂಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆಯಾದರೂ, ಇತ್ತೀಚಿನ ದೇಣಿಗೆ ಸಂಗ್ರಹವು ಇಸ್ಲಾಮಾಬಾದ್‍ನ ಕುಬುದ್ದಿಗೆ ಸಾಕ್ಷ್ಯಾಧಾರ ಒದಗಿಸಲಿದೆ.  ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಉಗ್ರಗಾಮಿಗಳಿಗೆ ಅಗತ್ಯವಾಗಿ ಬೇಕಾದ ಹಣ ಸಂಪನ್ಮೂಲಗಳ ಮಾರ್ಗವನ್ನು ಬಂದ್ ಮಾಡುವುದು, ಬ್ಯಾಂಕಿಂಗ್ ಮತ್ತು ನಾನ್ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ನಿಗಾ ಇಡುವುದು ಹಾಗೂ ಆ ಮೂಲಕ ಅವರ ಜಾಲವನ್ನು ವ್ಯವಸ್ಥಿತವಾಗಿ ಮಟ್ಟ ಹಾಕುವುದು. ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.

ಭಯೋತ್ಪಾದನೆ ವಿರುದ್ಧ ಹೋರಾಟ :

ಭಯೋತ್ಪಾದನೆ ವಿರುದ್ಧದ ಹೋರಾಟವು ಒಂದು ಅಂತಾರಾಷ್ಟ್ರೀಯ ವಿಷಯವಾಗಿದೆ. ಈ ಸಮರದಲ್ಲಿ ಜಗತ್ತಿನ ಎಲ್ಲ ದೇಶಗಳೂ ಒಗ್ಗೂಡಿ ಹೋರಾಟ ನಡೆಸಬೇಕೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮನವಿ ಮಾಡಿದ್ದಾರೆ. ಐದು ದಿನಗಳ ಐರೋಪ್ಯ ಪ್ರವಾಸಕ್ಕಾಗಿ ಹಂಗೇರಿ ರಾಜಧಾನಿ ಬುಡಾಪೆಸ್ಟ್‍ಗೆ ಶನಿವಾರ ರಾತ್ರಿ ಅಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೊದಲು ಪ್ರಾದೇಶಿಕ ಭಯೋತ್ಪಾದನೆಯನ್ನು ದಮನ ಮಾಡಬೇಕು. ಆನಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂಡವವಾಡುತ್ತಿರುವ ಆತಂಕವಾದವನ್ನು ನಿಗ್ರಹಿಸಬೇಕು ಎಂದು ಹೇಳಿದರು. ಹಂಗೇರಿ ಮತ್ತು ಅಲ್ಜಿರಿಯಾ ಜೊತೆ ಜಲ ನಿರ್ವಹಣೆ ಮತ್ತು ಮೂಲಸೌಕರ್ಯಾಭಿವೃದ್ಧಿ ಸೇರಿದಂತೆ ಅನೇಕ ಮಹತ್ವದ ಒಪ್ಪಂದಗಳಿಗೆ ಭಾರತ ಸಹಿ ಹಾಕಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin