ದಿಟ್ಟ ಹೆಜ್ಜೆಯಿಟ್ಟ ಸರ್ಕಾರ ನಿರ್ಧಾರ : ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್

ಈ ಸುದ್ದಿಯನ್ನು ಶೇರ್ ಮಾಡಿ

Belagavi-Mayor
ಬೆಂಗಳೂರು, ನ.4- ಬೆಳಗಾವಿ ಮಹಾನಗರ ಪಾಲಿಕೆ ಯನ್ನು ಸೂಪರ್‍ಸೀಡ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮೇಯರ್ ಸರಿತಾ ಪಾಟೀಲ್ ಮತ್ತು ಉಪಮೇಯರ್ ಅವರನ್ನು ಅನೂರ್ಜಿತಗೊಳಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಬೆಳಗಾವಿಯಲ್ಲಿ ನಡೆದ ಎಂಇಎಸ್‍ನ ಕರಾಳ ದಿನಾಚರಣೆಯನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದ್ದು,ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ವಿಚಾರ ಸರ್ಕಾರದ ಮುಂದಿದೆ. ಅದೇ ರೀತಿ ಉದ್ಧಟತನ ತೋರಿದ ಆ ಇಬ್ಬರನ್ನು ಕೂಡ ಮೇಯರ್-ಉಪಮೇಯರ್ ಹುದ್ದೆಯಿಂದ ಅನೂರ್ಜಿತಗೊಳಿಸುವ ವಿಚಾರವೂ ಸರ್ಕಾರದ ಪರಾಮರ್ಶೆಯಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಎಂಇಎಸ್ ನಡೆಸಿದ ಕರಾಳ ದಿನಾಚರಣೆಯ ರ್ಯಾಲಿಯಲ್ಲಿ ಪಾಲ್ಗೊಂಡ ಬಗ್ಗೆ ಜಿಲ್ಲಾಡಳಿತದಿಂದ ಸಮಗ್ರ ವರದಿಯನ್ನು ತರಿಸಿಕೊಳ್ಳಲಾಗಿದೆ. ವರದಿಯನ್ನು ಪರಿಶೀಲಿಸಲು ಕಾನೂನು ಇಲಾಖೆಗೆ ವಹಿಸಲಾಗಿದೆ. ಕಾನೂನು ತಜ್ಞರ ಸಲಹೆ ಪಡೆದು ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಮೇಯರ್-ಉಪಮೇಯರ್ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ನ.1ರಂದು ರಾಜ್ಯದೆಲ್ಲೆಡೆ ರಾಜ್ಯೋತ್ಸವ ಆಚರಿಸುತ್ತಿದ್ದರೆ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ಆಚರಿಸಿತ್ತು. ಸರ್ಕಾರದ ಪ್ರತಿನಿಧಿಗಳು ಎಂಬುದನ್ನು ಮರೆತು ಮೇಯರ್-ಉಪಮೇಯರ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದರಿಂದ ರಾಜ್ಯೋತ್ಸವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದರು. ನಾಡ ವಿರೋಧಿ ಘೋಷಣೆ ಕೂಗಿದ್ದಲ್ಲದೆ ಬಂದೂಕನ್ನು ಕೂಡ ರ್ಯಾಲಿಯಲ್ಲಿ ಪ್ರದರ್ಶಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಎಂಇಎಸ್ ಮುಖಂಡರೊಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಕರಾಳ ದಿನ ಆಚರಣೆ ಮಾಡಿದ ಬೆನ್ನಲ್ಲೆ ನಾಡಿನಾದ್ಯಂತ ಕನ್ನಡಪರ ಸಂಘಟನೆಗಳು, ವಿಚಾರವಂತರು ಆಕ್ರೋಶ ವ್ಯಕ್ತಪಡಿಸಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಮೇಯರ್-ಉಪಮೇಯರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು. ಅಲ್ಲದೆ, ಪದೇ ಪದೇ ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಎಂಇಎಸ್‍ಅನ್ನು ನಿಷೇಧಿಸಬೇಕೆಂದು ಕೂಡ ಕನ್ನಡಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

► Follow us on –  Facebook / Twitter  / Google+

Facebook Comments

Sri Raghav

Admin