ದಿನಕ್ಕೆ 8 ಗಂಟೆ ಕರೆಂಟ್ ಕಟ್..!?

ಈ ಸುದ್ದಿಯನ್ನು ಶೇರ್ ಮಾಡಿ

Current-Cut--01

ಬೆಂಗಳೂರು, ಡಿ.14- ಕೂಡಲೇ ತುರ್ತುಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದಿನಕ್ಕೆ ಎಂಟು ಗಂಟೆ ವಿದ್ಯುತ್ ಕಡಿತ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ವಿದ್ಯುತ್ ಕಂಪೆನಿಗಳ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ ಪ್ರಸ್ತುತ ವಿದ್ಯಮಾನಗಳು ಮತ್ತು ಮುಂದಿನ ಮಾರ್ಚ್ ವೇಳೆಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸವಿವರವಾದ ವರದಿ ನೀಡಿದ್ದಾರೆ. ಈಗಲೇ ನಾವು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಜನರ ಕೋಪ ನಮ್ಮ ಮೇಲೆ ಬೀಳುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ರಾಜ್ಯದಲ್ಲಿ ಸದ್ಯದ ಸಂದರ್ಭದಲ್ಲಿ 9607 ಯುನಿಟ್ (207 ಮೆಗಾ ವ್ಯಾಟ್) ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅದರಲ್ಲಿ ಶೇ.50ಕ್ಕಿಂತಲೂ ಹೆಚ್ಚು ಕೇಂದ್ರ ಸರ್ಕಾರದ ನೆರವಿನಲ್ಲೇ ನಡೆಯುತ್ತಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ನಡುವೆಯೇ ನಿರಂತರ ವಿದ್ಯುತ್ ನೀಡಲು ಅಡಚಣೆಯಾಗುತ್ತಿದೆ. ಮುಂದೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಅಕಸ್ಮಾತ್ ಸಹಕಾರ ನೀಡದಿದ್ದರೆ ಕರ್ನಾಟಕ ಕತ್ತಲೆಯಲ್ಲಿ ಮುಳಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ. ಕಲ್ಲಿದ್ದಲು ಗುತ್ತಿಗೆ ಆಧಾರದ ಮೇಲೆ ರಾಜ್ಯಕ್ಕೆ ಬರುತ್ತಿದೆ. ಗುಣಮಟ್ಟದಲ್ಲಿ ವ್ಯತ್ಯಯ ಹಾಗೂ ಸಣ್ಣಪುಟ್ಟ ದೋಷದಿಂದ ಕೆಲವೇ ದಿನಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಿದ್ದಾರೆ.

ಜಲವಿದ್ಯುತ್‍ನಿಂದ ಶೇ.20ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ ಮೇ ವೇಳೆಗೆ ಜಲಾಶಯಗಳು ಬತ್ತಿ ಹೋಗುತ್ತವೆ ಎಂದು ಎಳೆ ಎಳೆಯಾಗಿ ಮುಂದಿನ ದಿನಗಳ ಸಂಕಷ್ಟವನ್ನು ತಿಳಿಸಲಾಗಿದೆ.  ಇನ್ನು ಪವನ ವಿದ್ಯುತ್ 3 ಮಿಲಿಯನ್ ಯುನಿಟ್, ಬಹು ನಿರೀಕ್ಷೆಯ ಸೋಲಾರ್ ವಿದ್ಯುತ್‍ನಿಂದ ಕೇವಲ 5 ಮಿಲಿಯನ್ ಯುನಿಟ್ ಮಾತ್ರ ಸಿಗುತ್ತಿದೆ. ವಿದ್ಯುತ್, ಉಷ್ಣ ವಿದ್ಯುತ್‍ನಿಂದ ಸಾಕಷ್ಟು ಪ್ರಯೋಜನವಾಗುತ್ತಿದ್ದರೂ ಅಗತ್ಯದ ವಿದ್ಯುತ್ ನೀಡುವುದು ಅಸಾಧ್ಯವಾಗುತ್ತದೆ. ಕೇಂದ್ರದ ಗ್ರಿಡ್‍ನಿಂದ 70 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಾಗುತ್ತಿದೆ. ಇದೆಲ್ಲವನ್ನೂ ಈಗ ಸರಿದೂಗಿಸಿಕೊಂಡು ಹೋಗುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತಿದೆ. ಕೇಂದ್ರದ ಮೇಲೆ ಅವಲಂಬಿತವಾಗಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ. ಪರ್ಯಾಯ ಮಾರ್ಗದ ಬಗ್ಗೆ ಕೂಡಲೇ ಚಿಂತನೆ ನಡೆಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

Facebook Comments

Sri Raghav

Admin