ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇಂದೇ ತಾಪಮಾನ, ಜನ ಹೈರಾಣ

ಈ ಸುದ್ದಿಯನ್ನು ಶೇರ್ ಮಾಡಿ

Hot-Wethrr

ಬೆಂಗಳೂರು, ಫೆ.24-ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರದಿಂದ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು. ಫೆಬ್ರವರಿಯಲ್ಲೇ ಗರಿಷ್ಠ ಮಟ್ಟಕ್ಕೆ ಉಷ್ಣಾಂಶ ಏರಿಕೆಯಾಗಿದೆ. ಬೇಸಿಗೆಯನ್ನೂ ಮೀರಿಸುವ ಮಟ್ಟದಲ್ಲಿ ತಾಪಮಾನ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಂಡುಬರುತ್ತಿದ್ದು, ಜನರು ಕಂಗಾಲಾಗಿದ್ದಾರೆ.
ಒಂದೆಡೆ ತಾಪಮಾನ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದ್ದು, ಆದ್ರ್ರತೆ ಪ್ರಮಾಣವೂ ಕೂಡ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಶೇ.20ರ ಆಸುಪಾಸಿನಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೂ ಆದ್ರ್ರತೆ ಕಂಡು ಬರುತ್ತಿರುವುದು ಜನರು ತತ್ತರಿಸುವಂತೆ ಮಾಡಿದೆ.

ಮುಂಜಾನೆ ಹಾಗೂ ರಾತ್ರಿ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಬಿಸಿಲ ಧಗೆ ಸೆಖೆಯಿಂದ ಜನರು ಪರಿತಪಿಸುವಂತಾಗಿದೆ. ಕಳೆದ ಬಾರಿಯಂತೆ ಈ ಸಲವೂ ಕೂಡ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ತಾಪಮಾನ ರಾಜ್ಯದ ಹಲವು ಭಾಗಗಳಲ್ಲಿ ಕಂಡು ಬಂದಿದೆ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.  ಬಿಸಿಲನಾಡು ಎಂದೇ ಜನಪ್ರಿಯವಾಗಿರುವ ಹೈದರಾಬಾದ್-ಕರ್ನಾಟಕದ ಬಳ್ಳಾರಿ, ಗುಲ್ಬರ್ಗಾ, ಯಾದಗಿರಿ ಮತ್ತಿತೆರೆಡೆಗಳಲ್ಲಿ ಈಗಾಗಲೇ ಸರಾಸರಿ 38-39 ಡಿಗ್ರಿ ಸೆಲ್ಷಿಯಸ್‍ಗೆ ಗರಿಷ್ಠ ಉಷ್ಣಾಂಶ ತಲುಪಿದೆ ಎನ್ನುತ್ತಾರೆ. ಮುಂಬರುವ ಬೇಸಿಗೆಯಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಿ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ. ಸದ್ಯಕ್ಕಂತೂ ಮಳೆಯಾಗುವ ಲಕ್ಷಣಗಳಿಲ್ಲ. ಆಗೊಮ್ಮೆ-ಈಗೊಮ್ಮೆ ಬೀಳುವ ಅಕಾಲಿಕ ಮಳೆಯೂ ಬೀಳುವ ಮುನ್ಸೂಚನೆಗಳಿಲ್ಲ.

ಸುಮಾರು ಮೂರು ವಾರಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ನೀರನ್ನು ಮಿತವಾಗಿ ಬಳಸುವುದು ಸೂಕ್ತ. ಬಿಸಿಲಿನ ತಾಪಮಾನ ಹಾಗೂ ಸೆಖೆಯನ್ನು ಎದುರಿಸಲು ಜನರು ಸಿದ್ಧರಾಗುವುದು ಅನಿವಾರ್ಯ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin