ದಿನೇಶ್ ಗುಂಡೂರಾವ್ ಕೃಪಾಕಟಾಕ್ಷದಿಂದ ಪೆಟಿಕೋಟ್‍ ಮಾರುತ್ತಿದ್ದವನು ಕೋಟ್ಯಾಧಿಪತಿಯಾದ..!

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh--01

ಬೆಂಗಳೂರು, ನ.11- ಗಾಂಧಿನಗರದಲ್ಲಿ ಪೆಟಿಕೋಟ್‍ಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ ಈಗ ಸಾವಿರಾರು ಕೋಟಿ ರೂ.ಗಳ ಒಡೆಯ! ನಿಮಗೆ ಆಶ್ಚರ್ಯವಾಗಬಹುದು ಇದು ಸತ್ಯ. ಇದಕ್ಕೆ ಕಾರಣ ಬಿಬಿಎಂಪಿ ಹಾಗೂ ಗಾಂಧಿನಗರ ಶಾಸಕರ ಕೃಪಾಕಟಾಕ್ಷ. ಹೀಗೆಂದು ಆರೋಪ ಮಾಡಿರುವವರು ಬಿಜೆಪಿ ವಕ್ತಾರ ಎನ್.ಆರ್.ರಮೇಶ್. ಪೆಟಿಕೋಟ್ ಮಾರುತ್ತಿದ್ದ ವ್ಯಕ್ತಿಯೊಬ್ಬ ಬಿಬಿಎಂಪಿ ಗುತ್ತಿಗೆದಾರ. ಸಾವಿರಾರು ಕೋಟಿ ರೂ. ಒಡೆಯ. ಇವರಿಗೆ ಸದಾಕಾಲ ಬೆಂಬಲಕ್ಕೆ ನಿಲ್ಲುವವರು. ಇವರ ಅಕ್ರಮ ಅವ್ಯವಹಾರಗಳಿಗೆ ಸಹಕಾರ ನೀಡುವವರು ದಿನೇಶ್ ಗುಂಡೂರಾವ್ ಅವರು. ಆರ್.ಚಂದ್ರಪ್ಪ ಎಂಬ ಗುತ್ತಿಗೆದಾರ ಈಗ ಸಾವಿರಾರು ಕೋಟಿ ರೂ. ಮೌಲ್ಯದ ಮಾಲೀಕತ್ವದ ಕಟ್ಟಡಗಳ ಒಡೆಯರಾಗಿದ್ದಾರೆ.

ಇದು ಪೆಟಿಕೋಟ್ ಮಾರಾಟದಿಂದ ಬಂದಿದ್ದಲ್ಲ. ಬಿಬಿಎಂಪಿಯಲ್ಲಿ ಪಡೆದ ಗುತ್ತಿಗೆಯಲ್ಲಿ ಯಾಮಾರಿಸಿದ್ದು ಎಂದು ಎನ್.ಆರ್.ರಮೇಶ್ ಅವರು ಪತ್ರಿಕಾ ಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು. ಗುಪ್ತ ಮಾರುಕಟ್ಟೆಯಲ್ಲಿ ಪೆಟಿಕೋಟ್‍ಗಳನ್ನು ಮಾರುತ್ತಿದ್ದರು. ಈಗ ಆ ಗುಪ್ತ ಮಾರುಕಟ್ಟೆಯ ಮಾಲೀಕರು ಹಾಗು ಇನ್ನಿತರ ಕಟ್ಟಡಗಳ ಮಾಲೀಕರು. ಬಿಬಿಎಂಪಿ ಹಾಗೂ ಬಿಡಿಎ ಕಾಮಗಾರಿಗಳ ಗುತ್ತಿಗೆ ನಿರ್ವಹಿಸುವ ಇವರು ಕೆಲಸ ಮಾಡದೆ ಬಿಲ್‍ಗಳನ್ನು ಮಾಡಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

2015-16, 2016-17 ಮತ್ತು 2017-18ರ ಸಾಲಿನಲ್ಲಿ ಗಾಂಧಿನಗರ ವಿಭಾಗದ ನೂರಾರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ನೂರಾರು ಟೆಂಡರ್ ಗುತ್ತಿಗೆ ಪಡೆದು ಕಾನೂನು ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರು ಬೆಂಬಲ ನೀಡಿದ್ದಾರೆ ಎಂಬ ಆರೋಪವನ್ನು ಎನ್.ಆರ್.ರಮೇಶ್ ಮಾಡಿದರು.
ಇವರು ಹಾಗೂ ಇತರ 32 ಮಂದಿ ವಂಚಕ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸಿಐಡಿ ಅಧಿಕಾರಿಗಳು ಪಾಲಿಕೆಗೆ ಶಿಫಾರಸು ಮಾಡಿದ್ದಾರೆ.
ಇದ್ದಲ್ಲದೆ 2014-15ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕಷೇತ್ರದಲ್ಲಿ ಕಾಮಗಾರಿ ಮಾಡದೆ 9.5 ಕೋಟಿ ರೂ.ಗಳನ್ನು ಮಂಜೂರು ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಎಸಿಎಂಎಂ ನ್ಯಾಯಾಲಯದ ಆದೇಶದ ಅನ್ವಯ ಬಿಎಂಟಿಎಫ್ ಪೊಲೀಸರು ಆರ್.ಚಂದ್ರಪ್ಪ ಮತ್ತು ಆರು ಮಂದಿ ಅಧಿಕಾರಿಗಳ ವಿರುದ್ದ ಎಫ್‍ಐಆರ್ ದಾಖಲಿಸಿ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು ಎಂಬ ವಿವರಗಳನ್ನು ನೀಡಿದರು.

ಆದರೂ ಟೆಂಡರ್ ನಿಯಯಾವಳಿಗಳನ್ನು ಉಲ್ಲಂಘಿಸಿ ಚಂದ್ರಪ್ಪ ಅವರಿಗೆ ಟೆಂಡರ್ ದೊರೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಟೆಂಡರ್ ಪ್ರಕ್ರಿಯೆಲ್ಲಿ ಕಾನೂನು ಬಾಹಿರವಾಗಿ ಸಹಾಯ ಮಾಡಿದ್ದು, ದೃಢಪಟ್ಟು ಅಮಾನತ್ತಾಗಿ ಮಾತೃ ಇಲಾಖೆಗೆ ವರ್ಗಾವಣೆಯಾಗಿದ್ದ ಕಾರ್ಯಪಾಲಕ ಅಭಿಯಂತರ ಪಾಲಾಕ್ಷ ಅವರ ಪರವಾಗಿ ಶಾಸಕರು ನಿಂತು ಆಯುಕ್ತರ ವರ್ಗಾವಣೆ ಆದೇಶವನ್ನು ಧಿಕ್ಕರಿಸಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸುವಂತೆ ಬೆಂಬಲ ನೀಡಿರುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿರುವ ಅವರು ಈ ಎಲ್ಲ ಆರೋಪಗಳಬಗ್ಗೆ ಸಿಬಿಐ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದ ಅವರು , ತಪ್ಪಿತಸ್ಥರನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಇನ್ನಷ್ಟು ಸತ್ಯಾಂಶಗಳು ಹೊರಬರಲಿವೆ ಎಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin