ದೀಪಕ್‍ ಹತ್ಯೆ ಹಿನ್ನೆಲೆಯಲ್ಲಿ ಪ್ರಕ್ಷುಬ್ಧಗೊಂಡಿದ್ದ ಸೂರತ್ಕಲ್ ಸಹಜಸ್ಥಿತಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

Suratkal--02

ಮಂಗಳೂರು, ಜ.5-ದೀಪಕ್‍ರಾವ್ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಪ್ರಕ್ಷುಬ್ಧಗೊಂಡಿದ್ದ ಸೂರತ್ಕಲ್ ಸಹಜ ಸ್ಥಿತಿಯತ್ತ ಮರಳಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ಅವರ ಅಂತ್ಯಸಂಸ್ಕಾರ ನಿನ್ನೆ ಪೊಲೀಸ್ ಸರ್ಪಗಾವಲಿನಲ್ಲಿ ನೆರವೇರಿತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಹಲವು ಹಿಂದು ಪರ ಸಂಘಟನೆಗಳು, ಬಿಜೆಪಿ ಪಕ್ಷದವರು ಧರಣಿ, ಪ್ರತಿಭಟನೆ ನಡೆಸಿದವು. ಸೂರತ್ಕಲ್, ಕಾಟಿಪಳ್ಳ, ಮಂಗಳೂರು ಸೇರಿದಂತೆ ಹಲವೆಡೆ ನಿನ್ನೆ ಅಘೋಷಿತ ಬಂದ್‍ನ ವಾತಾವರಣವಿತ್ತು.

ಇಂದು ಪರಿಸ್ಥಿತಿ ತಹಬದಿಗೆ ಬಂದಿದ್ದು, ಎಂದಿನಂತೆ ಸಾಮಾನ್ಯವಾಗಿದೆ. ಸೂರತ್ಕಲ್ ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳು ತೆರೆದಿವೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅಂದೇ ಪೊಲೀಸರು ನಾಲ್ವರು ಆರೋಪಿಗಳನ್ನು ಕೂಡ ಬಂಧಿಸಿದ್ದರು.
ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ದೀಪಕ್‍ರಾವ್‍ನ ಮೃತದೇಹವನ್ನು ಮೆರವಣಿಗೆ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡದೆ ಆ್ಯಂಬುಲೆನ್ಸ್‍ನಲ್ಲಿ ಪಾರ್ಥಿವ ಶರೀರವನ್ನು ದೀಪಕ್ ಅವರ ಮನೆಗೆ ರವಾನಿಸಿದ್ದರು. ಪೊಲೀಸರ ಈ ಕ್ರಮ ಖಂಡಿಸಿ ಕಾಟಿಪಳ್ಳ ಗ್ರಾಮಸ್ಥರು, ಸಂಘ ಪರಿವಾರದ ಮುಖಂಡರು ಪ್ರತಿಭಟನೆ ನಡೆಸಿ ಪೊಲೀಸರು ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಶವಸಂಸ್ಕಾರ ಮಾಡಲು ಹಿಂದೇಟು ಹಾಕಿದ್ದರು.  ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಮೃತ ಕುಟುಂಬದವರ ಮನವೊಲಿಸಿದ ನಂತರ ಕಾಟಿಪಳ್ಳದ ದೀಪಕ್‍ರಾವ್ ನಿವಾಸದಿಂದ ಗಣೇಶ್‍ಕಟ್ಟೆ ಹಿಂದೂ ರುದ್ರಭೂಮಿಯವರೆಗೆ ಮೆರವಣಿಗೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅಂತ್ಯಸಂಸ್ಕಾರದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು. ಪೊಲೀಸರು ಭಾರೀ ಮುನ್ನೆಚ್ಚರಿಕಾ ಕ್ರಮವಹಿಸಿದ್ದರಿಂದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಈಗ ಸಹಜ ಸ್ಥಿತಿಗೆ ಮರಳಿದೆ. ಹತ್ಯೆ ಘಟನೆ ವಿರೋಧಿಸಿ ಇಂದು ಕೂಡ ಹಲವು ಪ್ರತಿಭಟನೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Facebook Comments

Sri Raghav

Admin