ದುಬಾರಿ ಶುಲ್ಕದ ವಿವಾದ, ಇಂದಿನಿಂದ ಹೊಸ ಚಿತ್ರಪ್ರದರ್ಶನ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Film

ಬೆಂಗಳೂರು, ಮಾ.9- ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರವೈಡರ್ ಸಂಸ್ಥೆ ವಿಧಿಸಿರುವ ದುಬಾರಿ ಶುಲ್ಕದ ಹಿನ್ನೆಲೆಯಲ್ಲಿ ಹೊಸ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದು, ಇಂದು ಬಿಡುಗಡೆಯಾಗಬೇಕಿದ್ದ ಎಂಟು ಚಿತ್ರಗಳು ಬಿಡುಗಡೆಗೊಳ್ಳದೆ ಆತಂಕ ಮುಂದುವರಿದಿದೆ. ಈ ಸಂಸ್ಥೆಗಳು ಶೇ.25ರಷ್ಟು ಹಣವನ್ನು ಕಡಿಮೆ ಮಾಡುವಂತೆ ಕೋರಿ ಮಾಡಿದ್ದ ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಾದ್ಯಂತ ಎಲ್ಲ ಭಾಷಾ ಚಿತ್ರಗಳ ಪ್ರದರ್ಶನ ರದ್ದುಗೊಳಿಸಿದ್ದು, ಹೊಸ ಚಿತ್ರಗಳನ್ನು ಪ್ರದರ್ಶಿಸದಂತೆ ಮಾಡಿದ್ದ ಮನವಿಗೆ ಪುರಸ್ಕರಿಸಿರುವ ನೂತನ ಚಿತ್ರಗಳ ನಿರ್ಮಾಪಕರು ನೀಡಿದ್ದ ಸಹಕಾರದಿಂದಾಗಿ ಇಂದು ಬಿಡುಗಡೆಯಾಗಬೇಕಿದ್ದ 8 ಚಿತ್ರಗಳು ಸ್ಥಗಿತಗೊಂಡಿವೆ.

ಸಂಸ್ಥೆಯವರು ಶೇ.25ರಷ್ಟು ಹಣ ಕಡಿಮೆ ಮಾಡುವ ಬದಲಿಗೆ ಶೇ.9ರಷ್ಟು ಹಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದ್ದರು. ಈ ಸಂಬಂಧ ಮಾತುಕತೆ ಮುಂದುವರಿದಿದ್ದು, ಶೇ.17ರಷ್ಟು ಹಣವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿತ್ರರಂಗ ಹಾಗೂ ಯುಎಫ್‍ಒ ಮತ್ತು ಕ್ಯೂಬ್ ಸರ್ವೀಸ್ ಪ್ರವೈಡರ್ ಸಂಸ್ಥೆಗಳ ನಡುವಿನ ಈ ವಿವಾದ ಬಗೆಹರಿದ ನಂತರ ಮೊದಲಿಗೆ ಸ್ಥಗಿತಗೊಂಡಿರುವ ಎಂಟು ಚಿತ್ರಗಳನ್ನು ಬಿಡುಗಡೆಗೊಳಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುತ್ತದೆ. ನಂತರ ಹಂತ ಹಂತವಾಗಿ ಮುಂದಿನ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಈಗಾಗಲೇ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಪಾಂಡಿಚೇರಿ ಸಂಸ್ಥೆಗಳ ವಿರುದ್ಧದ ನಿರ್ಧಾರಕ್ಕೆ ಬದ್ಧವಾಗಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿವೆ. ಇಂದಿನಿಂದ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ನಂಜುಂಡಿ ಕಲ್ಯಾಣ, ಓ ಪ್ರೇಮವೇ, ಶ್ರೀ, ಹೀಗೊಂದು ದಿನ, ಮುಖ್ಯಮಂತ್ರಿ ಕಳೆದೋದ್ನಪ್ಪೋ, ಸೋಜಿಗ ಚಿತ್ರಗಳು ತೆರೆ ಕಾಣಬೇಕಿತ್ತು. ಆದರೆ, ಸಂಸ್ಥೆಗಳ ನಡುವಿನ ಒಪ್ಪಂದ ತೀರ್ಮಾನವಾಗದ ಹಿನ್ನೆಲೆಯಲ್ಲಿ ಹೊಸ ಚಿತ್ರಗಳು ಬಿಡುಗಡೆಗೊಂಡಿಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin