ದುರ್ಗಾಮೂರ್ತಿ ಮತ್ತು ತಾಝಿಗಳ ಎತ್ತರಕ್ಕೆ ಬ್ರೇಕ್ ಹಾಕಿದ ಯೋಗಿ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಲಕ್ನೋ, ಸೆ.19-ನವರಾತ್ರಿ ದುರ್ಗಾ ಪೂಜೆ ಸಂದರ್ಭದಲ್ಲಿ ದುರ್ಗಾ ಮೂರ್ತಿಗಳ ಗಾತ್ರ ಮತ್ತು ಮೊಹರಂ ಮೆರವಣಿಗೆ ಹೊರುವ ತಾಝಿಗಳ ಎತ್ತರಕ್ಕೆ ಮಿತಿ ಹಾಕುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗೆ ಮುಂದಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಅವರು ದುರ್ಗಾ ಪೂಜೆ ಮತ್ತು ಮೊಹರಂ ಆಚರಣೆಗೆ ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

ಅವುಗಳಲ್ಲಿ ಪ್ರಮುಖವಾಗಿ ಯಾವುದೇ ಮೆರವಣಿಗೆಯಲ್ಲಿ ಅರ್ಕೆಸ್ಟ್ರಾ(ಡಿಜೆಸ್), ಧ್ವನಿವರ್ಧಕಗಳನ್ನು ಬಳಸುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ, ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ. ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲೇ ಮೆರವಣಿಗೆ ತೆರಳಬೇಕು, ಮರಗಳನ್ನು ಕಡಿಯುವಂತಿಲ್ಲ, ಯಾವುದೇ ಕಟ್ಟಡಗಳಿಗೆ ಹಾನಿ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಮೊಹರಂ ಮತ್ತು ದುರ್ಗಾಪೂಜೆ ಸಂದರ್ಭಗಳಲ್ಲಿ ಕೋಮುಗಲಭೆಗಳಾಗಿ ಸಾಕಷ್ಟು ಹಾನಿಯಾಗಿತ್ತು. ಪಶ್ಚಿಮ ಮತ್ತು ಈಶಾನ್ಯ ಭಾಗ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ವಾರಣಾಸಿ, ಗೋರಖ್‍ಪುರ, ಅಲಹಾಬಾದ್, ಲಕ್ನೋ, ಖಾನ್‍ಪುರ್, ಆಗ್ರಾ, ಮೀರತ್ ಮತ್ತು ಬರೇಲಿ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಸೆ.26 ರಿಂದ ಆರಂಭಗೊಳ್ಳುವ ದುರ್ಗಾ ಪೂಜೆ 30ಕ್ಕೆ ಅಂತ್ಯಗೊಳ್ಳಲಿದೆ. ಅ.1 ರಂದು ಮೊಹರಂ ದಿನವಾಗಿದೆ. ಈ ಎರಡೂ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ಮಾಡುವುದು ಉತ್ತರಪ್ರದೇಶದಲ್ಲಿ ಸವಾಲಿನ ಕೆಲಸವಾಗಿತ್ತು. ಹೀಗಾಗಿ ಯೋಗಿ ಆದಿತ್ಯನಾಥ್ ಅವರು ಮುಂಚಿತವಾಗಿಯೇ ಸಭೆ ನಡೆಸಿದ್ದಾರೆ. ಸೆ.21 ರಿಂದ ಪ್ರತಿ ಪಂಚಾಯ್ತಿ ವ್ಯಾಪ್ತಿ ಮತ್ತು ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಮಿತಿ ಸಭೆಗಳನ್ನು ನಡೆಸಬೇಕು, ದುರ್ಗಾ ಪೂಜೆಯ ನೇತೃತ್ವ ವಹಿಸುವವರು ಮತ್ತು ಮೊಹರಂ ಮೆರವಣಿಗೆ ನಡೆಸುವವರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾಮಟ್ಟದಲ್ಲೂ ಐದು ಮಂದಿ ಪ್ರಮುಖರ ಶಾಂತಿ ಸಮಿತಿಗಳನ್ನು ರಚಿಸುವಂತೆ ಸೂಚನೆ ನೀಡಲಾಗಿದೆ. ಗುಪ್ತಚರ ಇಲಾಖೆ ಕಾಲಕಾಲಕ್ಕೆ ಕಾನೂನು ಸುವ್ಯವಸ್ಥೆ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯಾಂಗ ಕಟ್ಟೆಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸೂಚಿಸಿದ್ದಾರೆ.

Facebook Comments

Sri Raghav

Admin