ದುಷ್ಟಶಕ್ತಿ ನಿಗ್ರಹಕ್ಕೆ ಬದ್ಧ : ಗೃಹ ಸಚಿವ ಡಾ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Paramesjwa-r

ಚಿಕ್ಕಮಗಳೂರು, ಆ.15-ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ರಾಷ್ಟ್ರದ ಅಖಂಡತೆಗೆ ಸವಾಲಾಗಿದೆ. ನೈತಿಕ ಪೊಲೀಸ್ ಹೆಸರಿನಲ್ಲಿ ಕೆಲವು ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವುದು ಖಂಡನೀಯ. ಇದು ಸಮಾಜದಲ್ಲಿ ಸಾಮರಸ್ಯ, ಶಾಂತಿ, ನೆಮ್ಮದಿಗೆ ಭಂಗ ತರುವಂತದ್ದಾಗಿದ್ದು, ಇಂತಹ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ನಮ್ಮ ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಸುಭಾಷ್‍ಚಂದ್ರ ಜಿಲ್ಲಾ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಪ್ರಯುಕ್ತ ಮಹಾತ್ಮ ಗಾಂಧೀಜಿಯವರು ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದೇಶ ಪ್ರೇಮಿಗಳನ್ನು ಹೋರಾಟದೆಡೆಗೆ ಹುರಿದುಂಬಿಸುವಂತೆ ತಮ್ಮ ಭಾಷಣದಲ್ಲಿ ಕರೆ ನೀಡಿರುವುದು ಒಂದು ಐತಿಹಾಸಿಕ ಘಟನೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟದ ದಿನಗಳನ್ನು ನೆನೆಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ದೇಶ ಸರ್ವ ಸ್ವಾತಂತ್ರ್ಯ, ಸಾರ್ವಭೌಮ ರಾಷ್ಟ್ರವಾಗಿ ಪಾದಾರ್ಪಣೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಭಾರತೀಯರಾದ ನಾವು ಆತ್ಮಾವಲೋಕನ ಮಾಡಿಕೊಂಡು ಎಲ್ಲರ ಮನಸ್ಸನ್ನು ಕಟ್ಟಿ ದೇಶವನ್ನು ಗಟ್ಟಿಗೊಳಿಸುವ ನೆಲೆಯನ್ನು ಚಿಂತಿಸಬೇಕಾಗಿದೆ.

ಸಮಾಜದಲ್ಲಿ ಎಲ್ಲಾ ಧರ್ಮೀಯರು ಸಹೋದರತೆ, ಸಾಮರಸ್ಯ, ಶಾಂತಿಯುತ ಬದುಕು ಸಾಧಿಸಲು ನಾವು ಪ್ರಯತ್ನಿಸಬೇಕು. ಶಾಂತಿ-ನೆಮ್ಮದಿಗೆ ಭಂಗ ತರುವ ಯಾವುದೇ ಶಕ್ತಿಗಳ ಪ್ರಯತ್ನಗಳನ್ನು ವಿಫಲಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಕರ್ನಾಟಕ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ ಜನಸ್ನೇಹಿ ವ್ಯವಸ್ಥೆಯನ್ನಾಗಿ ಮಾಡಿ ಕಾರ್ಯರೂಪಕ್ಕೆ ತರಲಾಗಿದೆ. ನಮ್ಮ ಮಂತ್ರಿಗಳು ಸಮಾಜವಾದದ ಹಿನ್ನೆಲೆಯುಳ್ಳವರಾಗಿದ್ದು, ರೈತರು ಮತ್ತು ಬಡಜನರ ಸಮಸ್ಯೆಗಳ ಅರಿವು ಅವರಿಗಿದ್ದು, ಎಲ್ಲರ ಸಹಕಾರದಿಂದ ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದ ಜನತೆ ಶಾಂತಿ ನೆಮ್ಮದಿಯಿಂದ ಬದುಕಲು ಅನುವಾಗುವಂತೆ ನಮ್ಮ ಸರ್ಕಾರ ಭ್ರಷ್ಟಾಚಾರ ನಿಗ್ರಹದಳವನ್ನು ಸ್ಥಾಪಿಸಿದೆ. ಇದರಂತೆ ನಮ್ಮ ಜಿಲ್ಲೆಯಲ್ಲೂ ಸಹ ಭ್ರಷ್ಟಾಚಾರ ನಿಗ್ರಹದಳ ಪ್ರಾರಂಭಿಸಲಾಗಿದೆ ಎಂದರು.  ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ತಾಲೂಕಿನ 58 ಸಾವಿರ ಕೃಷಿ ಜಮೀನಿಗೆ ನೀರು ಕೊಡಲು ಅಂದಾಜು ವೆಚ್ಚ ತಯಾರಿಸಿ 82 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸಲಾಯಿತು ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಿತು.ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಮುಖ್ಯ ನಿರ್ವಹಣಾಧಿಕಾರಿ ಡಾ.ರಾಗಪ್ರಿಯ, ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ನಗರಸಭೆ ಅಧ್ಯಕ್ಷ ದೇವರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin