ದೂರದೂರಿಂದ ಧರಣಿಗೆ ಬಂದ ಅಂಗನವಾಡಿ ಕಾರ್ಯಕರ್ತೆಯರ ಕಷ್ಟ ಯಾರ್ ಕೇಳ್ತಾರೆ..!

ಈ ಸುದ್ದಿಯನ್ನು ಶೇರ್ ಮಾಡಿ

Anganawadi--01

ಬೆಂಗಳೂರು, ಮಾ.21- ಇನ್ನೂ ವರುಷ ತುಂಬದ ಎಳೆ ಮಕ್ಕಳೊಂದಿಗೆ ಮಲಗಿದ ತಾಯಂದಿರು ಮತ್ತೊಂದೆಡೆ ಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡೇ ಪ್ರತಿಭಟನೆಯಲ್ಲಿ ಧಿಕ್ಕಾರ ಕೂಗುತ್ತಿದ್ದ ಮಹಿಳೆಯರು, ಇನ್ನೊಂದೆಡೆ ತಾವು ತಂದಿದ್ದ ಬ್ಯಾಗ್‍ಗಳನ್ನೇ ತಲೆದಿಂಬು ಮಾಡಿಕೊಂಡು ರಾತ್ರಿಯಿಡೀ ಕಳೆದ ಅಂಗನವಾಡಿ ಕಾರ್ಯಕರ್ತೆಯರು ಬೆಳಗ್ಗೆ ರೊಟ್ಟಿಬುತ್ತಿ ಬಿಚ್ಚಿಟ್ಟುಕೊಂಡು ಕುಳಿತು ತಿನ್ನುತ್ತಿದ್ದ ದೃಶ್ಯಗಳು ನಗರದ ಫ್ರೀಡಂಪಾರ್ಕ್‍ನಲ್ಲಿ ಕಂಡುಬಂತು.
ಕುಡಿಯುವ ನೀರಿಗಾಗಿ ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರು ಪರದಾಡುತ್ತಿದ್ದರು. ತಾವು ತಂದಿದ್ದ ಬಾಟಲ್‍ಗಳ ನೀರಿನಲ್ಲೇ ಮುಖ ತೊಳೆದುಕೊಳ್ಳುತ್ತಿದ್ದುದು ಕಂಡುಬಂತು. ನೀರನ್ನಾದರೂ ಕೊಡಿ ಎಂದು ಖಾಲಿ ಬಾಟಲ್‍ಗಳನ್ನು ಪ್ರದರ್ಶಿಸಿದರು.

Tumakuru--06

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಕೇಳುವವರೇ ಇಲ್ಲದಂತಾಗಿತ್ತು. ಪ್ರತಿಭಟನೆ ಮಾಡಲು ಜಾಗ, ಶೌಚಕ್ಕೆ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ತಾವು ತಂದಿದ್ದ ಬ್ಯಾಗ್‍ಗಳನ್ನು ದಿಂಬುಗಳನ್ನಾಗಿ ಮಾಡಿಕೊಂಡು ಮುಸುಕು ಹೊದ್ದು ಮಲಗಿ ರಾತ್ರಿ ಕಳೆದರು.

Tumakuru--04

ದೂರದೂರುಗಳಿಂದ ಪ್ರಯಾಣ ಮಾಡಿಕೊಂಡು ಬಳಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವರು ಸುಸ್ತಾಗಿದ್ದರು. ಅಸ್ವಸ್ಥರಾದವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಪ್ರತಿ ಬಾರಿ ಅಂಗನವಾಡಿಯವರು ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ ಎಂದು ಸರ್ಕಾರ ತಿಳಿದುಕೊಂಡಿತ್ತು. ಆದರೆ, ಈ ಬಾರಿ ಪ್ರತಿಭಟನೆ ತೀವ್ರಗೊಂಡಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Anganawadi--02

Tumakuru--05

Facebook Comments

Sri Raghav

Admin