ದೃಢಪಟ್ಟ ನೈಸ್ ಅಕ್ರಮ : 1350 ಕೋಟಿ ರೂ. ವಸೂಲಿ ಮತ್ತು ಸಿಬಿಐ ತನಿಖೆಗೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

Session-Belagavi-000001

ಬೆಳಗಾವಿ(ಸುವರ್ಣಸೌಧ), ಡಿ.2- ಹಲವಾರು ವರ್ಷಗಳಿಂದ ತೀವ್ರ ವಿವಾದಕ್ಕೆ ಗುರಿಯಾಗಿರುವ ನೈಸ್ ಸಂಸ್ಥೆಯ ಬಿಎಂಐಸಿ ಕಾರಿಡಾರ್ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ, ಅಕ್ರಮಗಳು ನಡೆದಿವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿ ನೀಡಿದೆ. ನೈಸ್ ಸಂಸ್ಥೆಗೆ ನೀಡಿರುವ 11,660 ಎಕರೆ ಭೂಮಿಯನ್ನು ಹಿಂಪಡೆಯಬೇಕು, ಅನಧಿಕೃತವಾಗಿ ವಸೂಲಿ ಮಾಡಲಾಗಿರುವ 1,350 ಕೋಟಿ ರೂ. ಟೋಲ್ ಹಣವನ್ನು ಸರ್ಕಾರ ವಸೂಲಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಲಾಗಿದೆ.
ನೈಸ್ ಸಂಸ್ಥೆಯ ಹಗರಣದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ನಾಡಿನ ಬಹಳಷ್ಟು ಮಂದಿ ಹಲವಾರು ಬಾರಿ ಚರ್ಚೆ ಮಾಡಿದ್ದಾರೆ.   ಇದೇ ಮೊದಲ ಬಾರಿಗೆ ವಿಧಾನಸಭೆಯಿಂದ ರಚನೆಯಾಗಿದ್ದ ಸದನ ಸಮಿತಿ ನೈಸ್ ಅಕ್ರಮಗಳನ್ನು ಅಧಿಕೃತವಾಗಿ ಬಯಲಿಗೆಳೆದಿದೆ. ಅದರಲ್ಲೂ ಸಚಿವರೇ ಅಧ್ಯಕ್ಷರಾಗಿರುವ ಸಮಿತಿ ನೈಸ್ ಸಂಸ್ಥೆ 22 ಅನುಚ್ಛೇದಗಳಲ್ಲಿ 16 ಅನುಚ್ಛೇದಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಹೇಳಿರುವುದು ಯೋಜನೆ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಆನೆ ಬಲ ತಂದುಕೊಟ್ಟಿದೆ.

ಕಳೆದ ಎರಡು ದಿನಗಳ ಹಿಂದೆ ನೈಸ್ ಸಂಸ್ಥೆ ವರದಿ ಮಂಡಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿದ್ದರು. ಆಗ ವರದಿಯಲ್ಲಿನ ಅಂಶಗಳ ಬಗ್ಗೆ ಚರ್ಚೆ ನಡೆಸಿ ನಂತರ ಸದನದಲ್ಲಿ ಮಂಡಿಸಲು ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಕೋಳಿವಾಡ ಅವರು ಭರವಸೆ ನೀಡಿದ್ದರು. ಅದರಂತೆ ಇಂದುಪ್ರಶ್ನೋತ್ತರ ಅವಧಿ ನಂತರ ಸಮಿತಿ ಅಧ್ಯಕ್ಷರೂ ಆಗಿರುವ ಟಿ.ಬಿ.ಜಯಚಂದ್ರ 392ಸುದೀರ್ಘ ಅಧ್ಯಯನ ವರದಿಯನ್ನು ಮಂಡಿಸಿದರು.  ವರದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಜಯಚಂದ್ರ ಅವರು 2014, ಸೆಪ್ಟೆಂಬರ್ 4 ರಂದು ಸದನ ಸಮಿತಿ ರಚಿಸಲಾಗಿತ್ತು. ಈವರೆಗೂ 27 ಅಧಿಕೃತ ಸಭೆಗಳನ್ನು ನಡೆಸಿ 10 ಅನಧಿಕೃತ ಸಭೆಗಳನ್ನು ನಡೆಸಿ ವರದಿ ಸಿದ್ದಪಡಿಸಲಾಗಿದೆ. ಇದನ್ನು ಸದನದಲ್ಲಿಂದು ಮಂಡಿಸುತ್ತಿದ್ದು, ಇದರ ಬಗ್ಗೆ ಚರ್ಚೆಯಾಗಲಿ, ನಂತರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿ ಎಂದು ಹೇಳಿದರು.

ವರದಿಯ ಪ್ರಮುಖ ಅಂಶಗಳು:

1997, ಏಪ್ರಿಲ್ 3 ರ ಕ್ರಿಯಾ ಒಪ್ಪಂದದಂತೆ ಬಿಎಂಐಸಿ ಯೋಜನೆ ಸಾಕಾರಗೊಂಡಿಲ್ಲ. ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಯೋಜನೆಯ ಪ್ರಗತಿಯಾಗಿಲ್ಲ. ಮೈಸೂರಿಗೆ ಅಂತಾರಾಷ್ಟ್ರೀಯ ವೇಗದ ಹೆದ್ದಾರಿ ನಿರ್ಮಿಸುವ ಸರ್ಕಾರದ ಉದ್ದೇಶವೂ ಸಾಕಾರವಾಗಿಲ್ಲ.  ಬಿಎಂಐಸಿ ಯೋಜನೆ ಮೂಲ ಸೌಕರ್ಯ ಕಲ್ಪಿಸುವ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. 22 ಅನುಚ್ಛೇದಗಳ ಪೈಕಿ 16 ಅನುಚ್ಛೇದಗಳನ್ನು ನೈಸ್ ಸಂಸ್ಥೆ ಉಲ್ಲಂಘಿಸಿದೆ. ನ್ಯಾಯಾಲಯಕ್ಕೆ ಆಶ್ವಾಸನೆ ನೀಡಿದಂತೆ ಯೋಜನೆಗೆ ಬಂಡವಾಳ ಹೂಡಿಕೆ ಮಾಡಿಲ್ಲ. ನ್ಯಾಯಾಲಯಗಳ ತೀರ್ಪಿನ ಅನುಸಾರ ಯೋಜನೆ ಅನುಷ್ಠಾನಗೊಂಡಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.

ಡಿಪಿಪಿ ಮಾಡೆಲ್‍ನಲ್ಲಿ 19 ವರ್ಷಗಳ ಹಿಂದೆ ಆರಂಭವಾದ ಈ ಯೋಜನೆ ಈವರೆಗೂ ಪೂರ್ಣಗೊಂಡಿಲ್ಲ. ಆದರೆ ಭೂಮಿಯ ನಿರ್ವಹಣೆ ಮಾತ್ರ ವಿವಾದಾತ್ಮಕವಾಗಿದೆ. ಪ್ರಮುಖವಾಗಿ ನಗರದ ಆಯಾಕಟ್ಟಿನ ಪ್ರದೇಶದಲ್ಲಿ 605 ಎಕರೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಯೋಜನೆ ವಿಳಂಬದಿಂದಾಗಿ ಭೂಮಿ ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ 11,660 ಎಕರೆಯನ್ನು ಭೂಸ್ವಾಧೀನದಿಂದ ಕೈಬಿಡಬೇಕು ಎಂದು ಪ್ರಮುಖವಾಗಿ ಶಿಫಾರಸು ಮಾಡಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹಿಸಬೇಕು ಎಂಬುದು ಯೋಜನೆಯ ಮೂಲ ಒಪ್ಪಂದ ಆಶಯವಾಗಿದೆ. ಆದರೆ ಡಾಂಬರು ರಸ್ತೆ ನಿರ್ಮಿಸಿ ಅನಧಿಕೃತವಾಗಿ 2008ರಿಂದ ಈವರೆಗೂ 1,350 ರೂ. ಟೋಲ್ ಸಂಗ್ರಹಿಸಲಾಗಿದೆ. ಇದನ್ನು ಸರ್ಕಾರ ಹಿಂಪಡೆಯಬೇಕು. 2202ರಲ್ಲಿ ತ್ರಿಪಕ್ಷೀಯ ಒಪ್ಪಂದ ಜಾರಿಯಾಗಿದ್ದು, ಇಂಟರ್‍ಚೇಂಜ್ ವ್ಯಾಪ್ತಿಯ ಜಮೀನನ್ನು ಮಾರಾಟ ಮಾಡುವ ಸೌಲಭ್ಯವನ್ನು ಅನಧಿಕೃತವಾಗಿ ಕಲ್ಪಿಸಲಾಗಿದೆ. ಇದನ್ನು ದುರುಪಯೋಗಪಡಿಸಿಕೊಂಡು ನೈಸ್ ಸಂಸ್ಥೆಯ ಅಂಗ ಸಂಸ್ಥೆಗಳಾದ ನೈಸೆಲ್ ಮತ್ತು ನೀಸೆಲ್ ಸಂಸ್ಥೆಗಳು ಜಮೀನಿನ ಜಂಟಿ ಅಭಿವೃದ್ಧಿ ಅಡಮಾನ, ಮಾರಾಟದ ಮೂಲಕ 4956 ಕೋಟಿ ರೂ.ಗಳನ್ನು ಲಾಭ ಮಾಡಿಕೊಂಡಿವೆ.

ಸಂಸ್ಥೆ ಕಾಡ್ರ್ರಾಸ್ಟಲ್ ಮ್ಯಾಪ್‍ಗಳನ್ನು ಸಲ್ಲಿಸದೆ ಟೀಮ್ ಅಪ್ರೂವಲ್ ಆಧಾರದ ಮೇಲೆ ಯೋಜನೆ ಜಾರಿಗೊಳಿಸುತ್ತಿದೆ. ಇದರಿಂದ ಜಮೀನಿನ ಬಳಕೆಯ ನಿರ್ದಿಷ್ಟ ಮಾಹಿತಿ ಸರ್ಕಾರಕ್ಕೆ ಸಿಕ್ಕಿಲ್ಲ. ಗೌಪ್ಯತೆ ಷರತ್ತನ್ನು ಮುಂದಿಟ್ಟುಕೊಂಡು ಅಗತ್ಯ ದಾಖಲೆಗಳನ್ನು ನಿರಾಕರಿಸಿರುವುದು ಖಂಡನೀಯ. ಯೋಜನೆಯ ವೆಚ್ಚ, ಬಂಡವಾಳ, ಬಾಧ್ಯತೆ ವಿವರಗಳಿರುವ ಬ್ಯಾಲೆನ್ಸ್ ಶೀಟನ್ನು ನೈಸ್ ಸಂಸ್ಥೆ ಈವರೆಗೂ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಜಯಚಂದ್ರ ಹೇಳಿದರು. ಸರ್ಕಾರ ವಿವಿಧ ತೆರಿಗೆ ರಿಯಾಯಿತಿಗಳನ್ನು ನೀಡಿದೆ. 250 ಕೋಟಿ ರೂ. ರಾಜಧನವನ್ನು ಸರ್ಕಾರಕ್ಕೆ ಪಾವತಿಸಿಲ್ಲ. ನೋಂದಣಿ ಮುದ್ರಾಂಕ ಶುಲ್ಕದ ಪೈಕಿ 5,688 ಎಕರೆ ಬದಲಾಗಿ, 14,337 ಎಕರೆಗೆ ರಿಯಾಯಿತಿ ನೀಡಲಾಗಿದೆ. ಸಂಸ್ಥೆಯ ವಶದಲ್ಲಿರುವ ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಜಯಚಂದ್ರ ಆರೋಪಿಸಿದರು.

ನೈಸೆಲ್ ಸಂಸ್ಥೆ ನಗರ ಸಮುಚ್ಛಯ ಹಾಗೂ ವೇಗದ ಹೆದ್ದಾರಿ ಅಭಿವೃದ್ಧಿಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಸುಮಾರು 100 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದೆ. ಇವುಗಳ ಮರುಪರಿಶೀಲನೆ ಅರ್ಜಿ ಸಲ್ಲಿಸುವಲ್ಲಿ ಸಾಕಷ್ಟು ವೈಫಲ್ಯಗಳಾಗಿವೆ. ಆದರೂ ನೈಸ್ ಸಂಸ್ಥೆ ಸರ್ಕಾರದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಖೇದದ ವಿಷಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮೂಲ ಒಪ್ಪಂದಕ್ಕೆ ವ್ಯತಿರಿಕ್ತವಾಗಿ ಗಳಿಸಿರುವ ಆದಾಯವನ್ನು ಮೌಲ್ಯಮಾಪನ ಮಾಡಿ ಅನುದ್ದೇಶಿತ ಲಾಭ ಎಂದು ಪರಿಗಣಿಸಲಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಅನುದ್ದೇಶಿತ ಲಾಭವೇ ಹೆಚ್ಚಾಗಿದೆ. 600 ಎಕರೆಯನ್ನು ಅನಧಿಕೃತವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ ನೈಸ್ ಸಂಸ್ಥೆ ತನ್ನ ವ್ಯಾಪ್ತಿಯನ್ನು ಮೀರಿ 4,956 ಕೋಟಿ ರೂ. ಲಾಭ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಉಪನಗರ ಯೋಜನೆಗೆ 16 ಎಕರೆಗಳಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಇದನ್ನು ನೈಸೆಲ್ ಸಂಸ್ಥೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ನಂತರ ದಾವೆ ಹಿಂಪಡೆದಿದೆ. ಮೂಲ ಒಪ್ಪಂದವನ್ನು ಉಲ್ಲಂಘಿಸಿ ಸಾಕಷ್ಟು ಮಾಡಿರುವ ಈ ಯೋಜನೆ ಬಗ್ಗೆ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ. ಖಾಸಗಿ ಪಾಲುದಾರರ ಮತ್ತು ಸರ್ಕಾರದ ವೈಫಲ್ಯದ ಹಿನ್ನೆಲೆಯಲ್ಲಿ ಆರ್ಥಿಕ ನಷ್ಟದ ಮೌಲ್ಯಮಾಪನ ನಡೆಯಬೇಕಿದೆ ಎಂದು ಜಯಚಂದ್ರ ಅಭಿಪ್ರಾಯಪಟ್ಟರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin