ದೆಹಲಿಯಲ್ಲಿ 4.4 ತೀವ್ರತೆಯ ಲಘು ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

earthquake-02
ನವದೆಹಲಿ, ನ.17-ರಾಜಧಾನಿ ದೆಹಲಿ ಮತ್ತು ಹರ್ಯಾಣ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ, ಜನತೆ ಭಯಭೀತರಾದರು. ಭೂಕಂಪದಿಂದ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.  ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಾದ ಗುರ್‍ಗಾಂವ್, ಫರಿದಾಬಾದ್, ನೊಯ್ದಾ, ಮತ್ತು ಘಾಜಿಯಾಬಾದ್ ಹಾಗೂ ಹರಿಯಾಣದಲ್ಲಿ ಇಂದು ಬೆಳಿಗ್ಗೆ 4.28ರ ಸುಮಾರಿನಲ್ಲಿ ಭೂಮಿ ಕಂಪಿಸಿತು. ಸುಖ ನಿದ್ರೆಯಲಿದ್ದ ಅನೇಕರು ಎಚ್ಚರಗೊಂಡು ಗಾಬರಿಯಿಂದ ಹೊರಗೊಡಿ ಬಂದರು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.4ರಷ್ಟಿದ್ದು, ದೆಹಲಿ-ಹರ್ಯಾಣ ಗಡಿ ಪ್ರದೇಶದ ರೇವಾರಿ ಜಿಲ್ಲೆಯ ಬವಾಲ್‍ನಲ್ಲಿ ಅದರ ಕೇಂದ್ರ ಬಿಂದು ದಾಖಲಾಗಿತ್ತು. 10 ಕಿ.ಮೀ. ಅಳದಲ್ಲಿ ಈ ಭೂಕಂಪ ಉಂಟಾಗಿದೆ ಎಂದು ಅಮೆರಿಕ ಭೂಗರ್ಭ ಸಮೀಕ್ಷಾ ಇಲಾಖೆ ತಿಳಿಸಿದೆ.  ಭೂಮಿಯು ಸುಮಾರು ಒಂದು ನಿಮಿಷ ಕಾಲ ಕಂಪಿಸಿದ ಬಗ್ಗೆ ವರದಿಯಾಗಿದ್ದು, ಕೆಲವೆಡೆ ಜನರು ಆತಂಕಗೊಂಡು ಮನೆಗಳಿಂದ ಹೊರಗೆ ಬಂದರು. ಇನ್ನೂ ಕೂಡ ಮನೆಗಳ ಒಳಗೆ ಪ್ರವೇಶಿಸಲು ಹೆದರಿ ರಸ್ತೆಗಳಲ್ಲೇ ಠಿಕಾಣಿ ಹೂಡಿದ್ದಾರೆ.  ಈ ಘಟನೆ ನಂತರ ಅನೇಕರು ಟ್ವೀಟ್‍ಗಳನ್ನು ಮಾಡಿ ಭೂಮಿ ಗಡಗಡ ನಡುಗಿದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಪಂಜಾಬ್‍ನ ಜಲಂಧರ್‍ನಲ್ಲಿ ನಿನ್ನೆ ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin