ದೆಹಲಿ ಮುಟ್ಟಿದ ಕಾವೇರಿ ಕೂಗು : ಉಮಾಭಾರತಿ-ಸಿದ್ದರಾಮಯ್ಯ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Uma-Bha

ಬೆಂಗಳೂರು, ಸೆ.22- ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ರಾಜ್ಯ ಸರ್ಕಾರ ಕ್ಯೂರೆಟಿವ್ ಅರ್ಜಿ ಸಲ್ಲಿಸುವುದಾದರೆ ಕೇಂದ್ರ ಸರ್ಕಾರ ಕಾನೂನಿನ ನೆರವು ನೀಡುವುದಾಗಿ ಭರವಸೆ ನೀಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಸುಪ್ರೀಂಕೋರ್ಟ್‍ನಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರ್ಟ್‍ಗೆ ಕ್ಯೂರೆಟಿವ್ ಅರ್ಜಿ ಸಲ್ಲಿಸಿದರೆ ಕೇಂದ್ರ ಅಗತ್ಯ ಕಾನೂನು ನೆರವು ನೀಡುವ ಮೂಲಕ ರಾಜ್ಯದ ಬೆಂಬಲಕ್ಕೆ ಬರುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೇಂದ್ರ ಸಚಿವೆ ಉಮಾಭಾರತಿ ಅವರನ್ನು ಭೇಟಿ ಮಾಡಲು ಇಂದು ನವದೆಹಲಿಗೆ ಸಿಎಂ ತೆರಳಿದ್ದು, ಅದಕ್ಕೂ ಮುನ್ನ ಸಿದ್ದರಾಮಯ್ಯ ಅವರಿಗೆ ಈ ಭರವಸೆ ದೊರೆತಿದೆ ಎನ್ನಲಾಗಿದೆ.

ವಿವಾದ ನ್ಯಾಯಾಲಯದಲ್ಲಿರುವುದರಿಂದ ಪ್ರಧಾನಿ ಅವರು ಮಧ್ಯಪ್ರವೇಶ ಸಾಧ್ಯತೆ ಕಡಿಮೆ ಇದೆ. ನ್ಯಾಯಾಲಯದಲ್ಲಿ ತೀರ್ಪು ಬಗೆಹರಿಸಬೇಕಾಗಿದೆ. ಈಗಾಗಲೇ ಪ್ರಕರಣ ಸಂಬಂಧ ತೀರ್ಪು ಹೊರ ಬಿದ್ದಿರುವುದರಿಂದ ಸರ್ಕಾರ ಕ್ಯೂರೆಟಿವ್ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಮ್ಮ ನೆರವಿಗೆ ಬರುತ್ತದೆ. ಸುಪ್ರೀಂಕೋರ್ಟ್ ಆದೇಶ ನೀಡಿರುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ನ್ಯಾಯಾಲಯದಲ್ಲಿ ಕಾಲಾವಕಾಶವನ್ನು ಕೇಳುತ್ತೇವೆ ಎಂದು ಉಮಾಭಾರತಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಕರ್ನಾಟಕ ರಾಜ್ಯದ ಎಸ್‍ಎಲ್‍ಪಿ ಅರ್ಜಿ ವಿಚಾರಣಾ ಬಾಕಿ ಇದ್ದು, ಅದು ಮುಗಿಯುವವರೆಗೆ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಿದೆ. ಈ ಮೂಲಕ ರಾಜ್ಯದ ನೆರವಿಗೆ ಬರುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ತಮಿಳುನಾಡಿಗೆ 1.68 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ನಿಗದಿಗಿಂತ 18ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿ ಸಲ್ಲಿಸಿದರೆ ನ್ಯಾಯ ಸಿಗಬಹುದೆಂಬ ಕೊನೆಯ ಆಶಾಭಾವನೆ ರಾಜ್ಯಕ್ಕೆ ಸಿಕ್ಕಿದಂತಾಗಿದೆ. ರಾಜ್ಯ ಸರ್ಕಾರ ಕ್ಯೂರೆಟಿವ್ ಅರ್ಜಿ ಸಲ್ಲಿಸಲಿದೆಯೋ, ಇಲ್ಲವೋ ಕಾದು ನೋಡಬೇಕು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮಭಾರತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅ.18ರಂದು ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ದಿನಾಂಕ ನಿಗದಿ ಮಾಡಿತ್ತು. ಅಲ್ಲಿ ತೀರ್ಪು ಬರುವ ಮುನ್ನವೇ ನ್ಯಾಯಮೂರ್ತಿಗಳಾದ ಉದಯ್‍ಲಲಿತ್ ಹಾಗೂ ದೀಪಕ್‍ಮಿಶ್ರ ಅವರ ಪೀಠ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡಿರುವುದು ಸರಿಯಲ್ಲ ಎಂಬ ವ್ಯಾಪಕ ಟೀಕೆ ಕೇಳಿ ಬಂದಿತ್ತು.

ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನೀರು ನಿರ್ವಹಣಾ ಮಂಡಳಿ ರಚನೆಗೆ ಮುಂದಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮಾ ಭಾರತಿ ಅವರನ್ನು ಒತ್ತಾಯಿಸಲಿದ್ದಾರೆ.  ನಾಳೆ ವಿಶೇಷ ಅಧಿವೇಶನ ನಡೆಯಲಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರ್ಕಾರ ಯಾವ ರೀತಿ ನೆರವು ನೀಡಲಿದೆ ಎಂಬುದನ್ನು ಕಾದುನೋಡಬೇಕು.
ನಿನ್ನೆ ಕಾವೇರಿ ಬಿಕ್ಕಟ್ಟು ನಿವಾರಣಾ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿತ್ತು. ಬಿಜೆಪಿ ಮುಖಂಡರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದರಾದರೂ ಈ ಸಂಬಂಧ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರಲಿಲ್ಲ. ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲು ಸೂಚಿಸಿದ್ದರು.   ರಾಜ್ಯದಲ್ಲಿ ಬಿಜೆಪಿಯ ಈ ಧೋರಣೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಜುಗರದಿಂದ ಪಾರಾಗಲು ಕೇಂದ್ರದ ಜತೆ ಕಸರತ್ತು ನಡೆಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin