ದೇವರಾಜ ಮಾರುಕಟ್ಟೆ ಪ್ರವೇಶ ದ್ವಾರ ಕುಸಿತ : ನೂತನ ಕಟ್ಟಡಕ್ಕೆ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

parmeshwar--G

ಮೈಸೂರು, ಆ.29-ಅತ್ಯಂತ ಪುರಾತನ ಕಟ್ಟಡವಾದ ದೇವರಾಜ ಮಾರುಕಟ್ಟೆಯ ಪ್ರವೇಶ ದ್ವಾರ ಕುಸಿದಿರುವುದರಿಂದ ಇದನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.ನಗರದ 130 ವರ್ಷಗಳ ಇತಿಹಾವಿರುವ ದೇವರಾಜ ಮಾರುಕಟ್ಟೆ ಮುಖ್ಯ ಪ್ರವೇಶ ದ್ವಾರದಲ್ಲಿ ಒಂದು ದ್ವಾರ ನಿನ್ನೆ ಕುಸಿದು ಬಿದ್ದಿರುವ ಸ್ಥಳಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಇದನ್ನು ಉಳಿಸಿಕೊಳ್ಳಲು ನವೀಕರಣ ಮಾಡುವ ಉದ್ದೇಶ ಇತ್ತು. ಅಷ್ಟರಲ್ಲೇ ದ್ವಾರದ ಒಂದು ಭಾಗ ಕುಸಿದು ಬಿದ್ದಿದೆ.

ಇಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಇದೇ ಕಟ್ಟಡದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಿದ್ದು, ಅದನ್ನೂ ಸಹ ತೆರವುಗೊಳಿಸಿ ಸ್ಥಳಾಂತರ ಮಾಡುವುದಾಗಿ ತಿಳಿಸಿದರು.ಅತ್ಯಂತ ಜನನಿಬಿಡ ಪ್ರದೇಶವಾದ ಇಲ್ಲಿ ಪ್ರತಿದಿನ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಓಡಾಡುತ್ತಾರೆ. ನಿನ್ನೆ ಭಾನುವಾರವಾದ್ದರಿಂದ ಜನಸಂದಣಿ ಕಡಿಮೆ ಇತ್ತು. ಆದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.ಶಾಸಕ ವಾಸು ಸೇರಿದಂತೆ ಮತ್ತಿತರರು ಜೊತೆಗಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin