ದೇವರ ದರ್ಶನ ಪಡೆದು ಮತದಾನ ಮಾಡಿದ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

yaddu-kummi

ಬೆಂಗಳೂರು,ಮೇ12-ಮುಖ್ಯಮಂತ್ರಿ ಅಭ್ಯರ್ಥಿಗಳ ಪ್ರಬಲ ಆಕಾಂಕ್ಷಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರುಗಳು ಮತದಾನಕ್ಕೂ ಮುನ್ನ ದೇವರ ದರ್ಶನ ಪಡೆದದ್ದು ವಿಶೇಷವಾಗಿತ್ತು. ಶಿಕಾರಿಪುರದಲ್ಲಿ ಯಡಿಯೂರಪ್ಪ ಬೆಳಗ್ಗೆ ಮತದಾನಕ್ಕೂ ಮುನ್ನ ಇಲ್ಲಿನ ಸಂಕಟ ವಿಮೋಚನಾ ಆಂಜನೇಯ ದೇವಸ್ಥಾನಕ್ಕೆ ತೆರಳಿ ತಮ್ಮ ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿದರು.  (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

ಪುತ್ರರಾದ ವಿಜಯೇಂದ್ರ, ರಾಘವೇಂದ್ರ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಸಾಮಾನ್ಯವಾಗಿ ಯಾವುದೇ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಮತದಾನಕ್ಕೂ ಮುನ್ನ ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.  ಈ ಬಾರಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ.

ಇತ್ತ ಜೆಡಿಎಸ್ ದಳಪತಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಕೂಡ ಮತದಾನಕ್ಕೂ ಮುನ್ನ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ತೆರಳಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕಾಲಭೈರವೇಶ್ವರನ ಭಕ್ತರಾಗಿರುವ ದೇವೇಗೌಡರ ಕುಟುಂಬ ಯಾವುದೇ ಪ್ರಮುಖ ಕಾರ್ಯಗಳನ್ನು ಆರಂಭಿಸುವ ಮುನ್ನ ಸಾಮಾನ್ಯವಾಗಿ ಆದಿಚುಂಚನಗಿರಿ ಮಠದ ಶ್ರೀಗಳ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಮಾಗಡಿ ತಾಲ್ಲೂಕಿನ ಕೇತಮಾರನಹಳ್ಳಿಯಲ್ಲಿ ಕುಟುಂಬ ಸಮೇತ ಮತದಾನ ಮಾಡುವ ಮುನ್ನ ಕುಮಾರಸ್ವಾಮಿ ದಂಪತಿ ಶ್ರೀಗಳ ಆಶೀರ್ವಾದ ಪಡೆದು ನಂತರ ಮತ ಚಲಾಯಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.  ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಸ್ಪರ್ಧಿಸಿರುವ ಬಳ್ಳಾರಿ ಸಂಸದ ಶ್ರೀರಾಮುಲು ಮತದಾನಕ್ಕೂ ಮುನ್ನ ಗೋಪೂಜೆ ಸಲ್ಲಿಸಿದರು. ಹೀಗೆ ಹಲವರು ತಮ್ಮ ಹಕ್ಕು ಚಲಾಯಿಸುವ ಮುನ್ನ ಮಠಮಂದಿರಗಳು, ದೇವಸ್ಥಾನಗಳಿಗೆ ತೆರಳಿ ನಂತರವೇ ಮತದಾನ ಮಾಡಿರುವುದು ಈ ಚುನಾವಣೆಯ ವಿಶೇಷ ಎನಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin