ದೇವರ ಹಿಪ್ಪರಗಿ ಸಮೀಪ ಕ್ರೂಸರ್ ಪಲ್ಟಿಯಾಗಿ ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Cruiser-Accident

ವಿಜಯಪುರ (ದೇವರ ಹಿಪ್ಪರಗಿ),ಏ.26- ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನವೊಂದು ಪಲ್ಟಿ ಹೊಡೆದು ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 218ರ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೃತರನ್ನು ಚಾಲಕ ಅಬ್ದುಲ್ (35) ಮದಾನಂದ ಕೆರೂರು (40) ಹಾಗೂ ಮಾಣಿಕ್ ಸಾಹುಕಾರ್ (50) ಎಂದು ಗುರುತಿಸಲಾಗಿದೆ. ಇನ್ನೋರ್ವ ಮಹಿಳೆ ಹೆಸರು ತಿಳಿದುಬಂದಿಲ್ಲ. ಇವರೆಲ್ಲರೂ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಗ್ರಾಮದವರು ಎನ್ನಲಾಗಿದೆ.ಅಮವಾಸೆ ನಿಮಿತ್ತ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಘತರಗಿ ಭಾಗಮ್ಮನ ದರ್ಶನಕ್ಕೆ ಹೊರಟಾಗ ನಸುಕಿನ ಜಾವ ಈ ಘಟನೆ ಸಂಭವಿಸಿದ್ದು ಕ್ರೂಸರ್ ಪಲ್ಟಿ ಹೊಡೆದು ನಂತರ ರಸ್ತೆ ಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಮೇಶ್ ಯಂಕಂಚಿ, ಪ್ರಮೋದ್ ಪಾವಟೆ, ಅಶೋಕ್ ಮನೆವಾಡ್ ಹಾಗೂ ಉಮೇಶ್ ರಾಥೋಡ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರುಗಳ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin