ದೇವಸ್ಥಾನದಲ್ಲಿ ವಸ್ತ್ರಸಂಹಿತೆ ವಿರೋಧಿಸಿ ಅ.21ರಂದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--01

ಬೆಂಗಳೂರು,ಅ.11-ದೇವಸ್ಥಾನ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಅ.21 ರಂದು ಕನ್ನಡ ಒಕ್ಕೂಟ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯ ವಸ್ತ್ರಧಾರಣೆ ಹಕ್ಕಿನ ಮೇಲೆ ಸರ್ಕಾರ ನಿರ್ಬಂಧ ಹೇರಲು ಮುಂದಾಗಿರುವುದು ಸರಿಯಲ್ಲ. ಪ್ರತಿಯೊಬ್ಬರು ಅವರು ಇಷ್ಟಪಟ್ಟಂತೆ ವಸ್ತ್ರ ಧರಿಸುವ ಸ್ವಾತಂತ್ರ್ಯ ಇದೆ. ಈ ಕಾರಣ ನಾವು ಈ ಹಕ್ಕು ಹರಣವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಗೋವಾದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಗ್ರಹಿಸಲು ಅಕ್ಟೋಬರ್ 15 ರಂದು ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಹೇಳಿದರು. ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆ, ನೆಲಕ್ಕೆ ಸಂಬಂಧಿಸಿದ ಹೋರಾಟಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿಕೆ ನೀಡುವ ಮೂಲಕ ಕನ್ನಡಿಗರ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಿಜಕ್ಕೂ ರಾಜ್ಯದಲ್ಲಿ ಇದೊಂದು ಗಂಭೀರ ಪರಿಸ್ಥಿತಿಯಾಗಿದ್ದು, ಭಾಷೆ, ನೆಲ,ಜಲಕ್ಕಾಗಿ ಹೋರಾಡು ಕನ್ನಡ ಚಳವಳಿಗಾರರ ಮೇಲೆ ಅನಗತ್ಯ ಪ್ರಕರಣಗಳನ್ನು ದಾಖಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದನ್ನು ಕೈಬಿಡಬೇಕು. ಒಂದು ವೇಳೆ ಸರ್ಕಾರ ಈ ಪ್ರಯತ್ನವನ್ನು ಮುಂದುವರೆಸಿದರೆ ರಾಜ್ಯಾದ್ಯಂತ ಕನ್ನಡ ಪರ ಚಳವಳಿಗಾರರು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಾ.ರಾ.ಗೋವಿಂದು, ಪ್ರವೀಣ್‍ಕುಮಾರ್‍ಶೇಟ್ಟಿ, ಗಿರೀಶ್‍ಗೌಡ, ಕೆ.ಆರ್.ಕುಮಾರ್ ಮತ್ತಿತರರಿದ್ದರು.

Facebook Comments

Sri Raghav

Admin