ದೇಶಕಾಯುವ ಕಾಯಕ ಅರಸಿ ಬಂದವರು ರಸ್ತೆಯಲ್ಲೇ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

Recruitment

ಯಲಹಂಕ, ಮಾ.31- ನಗರದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ರಾಷ್ಟ್ರೀಯ ಅರೆಸೇನಾ ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಪ್ರತಿ ವರ್ಷ ಸಾವಿರಾರು ಪದವೀಧರರು ಸೇರಿದಂತೆ ಹಲವು ಹುದ್ದೆಗಳಿಗೆ ಎಲ್ಲಾ ವರ್ಗದ ಯುವಕರನ್ನು ಸೇನೆಗೆ ನೇಮಕಕ್ಕಾಗಿ ಇಲ್ಲಿ ಪರಿಶೀಲನೆ ನಡೆಸಲಾಗುತ್ತದೆ.
ಆದರೆ, ದೂರದೂರುಗಳಾದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯ ಅಲ್ಲದೆ ಹೊರ ರಾಜ್ಯಗಳಿಂದ ಇಲ್ಲಿಗೆ ಬರುವ ಸಾವಿರಾರು ಯುವಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ ಎಂಬುದು ನಾಗರಿಕ ಸಮಾಜ ನಾಚಿಕೆ ಪಡುವಂತಾಗಿದ್ದು, ರಸ್ತೆಬದಿ, ತೋಪುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಕಲಾ ಕಳೆಯುವ ಇವರ ಸ್ಥಿತಿ ನೋಡಿದರೆ ಬೇರ್ಯಾರಿಗೂ ಸೇನೆ ಸೇರುವುದೇ ಬೇಡ ಎಂದೆನಿಸದಿರದು.

ಇಲ್ಲಿ ನಡೆಯುವ ಸೆಲೆಕ್ಷನ್‍ಗೆ ಒಮ್ಮೆ 500 ರಿಂದ 800 ಯುವಕರು ಬರುವರು. ಇಲ್ಲಿನ ನಿಯಮದಂತೆ 5 ನಿಮಿಷ ತಡವಾದರೂ ಒಳಗೆ ಪ್ರವೇಶ ನೀಡುವುದಿಲ್ಲವಾದ್ದರಿಂದ ಬೆಳಿಗ್ಗೆ 5ಗಂಟೆಗಳಿಗೆ ಶುರುವಾಗುವ ಪ್ರಕ್ರಿಯೆಗೆ ರಾತ್ರಿಯೆಲ್ಲಾ ಇಲ್ಲಿ ವಾಸ್ತವ್ಯ ಹೂಡುತ್ತಾರೆ.   ಆದರೆ, ವಿಪರ್ಯಾಸ ಎಂದರೆ ಊಟ-ತಿಂಡಿ ಸೇರಿ ಕುಡಿಯಲೂ ನೀರು ಇಲ್ಲ, ಸುತ್ತಮುತ್ತಲ ಪ್ರದೇಶ ಇಂದಿಗೂ ಸಾಕಷ್ಟು ನಗರದಿಂದ ಹೊರ ಭಾಗದಲ್ಲಿರುವುದರಿಂದ ಸಾರಿಗೆ ವ್ಯವಸ್ತೆ, ಹೋಟೆಲ್,
ಲಾಡ್ಜ್‍ಗಳು ಸಹ ಇಲ್ಲ ವಾದ್ದರಿಂದ ರಸ್ತೆ ಬದಿಯಲ್ಲೆ ಕಲಾ ಕಳೆಯುವ ಸ್ಥಿತಿ ಇದ್ದು ಕನಿಷ್ಠ ವಿಚಾರಿಸುವವರೂ ಯಾರೂ ಇರುವುದಿಲ್ಲ.

ದೂರ ದೂರುಗಳಿಂದ ಬರುವವರಿಗೆ ಭೂಮಿಯೆ ಆಸಿಗೆ ಮತ್ತು ಆಕಾಶವೆ ಹೊದಿಕೆ ಎಂಬಂತೆ ತಬ್ಬಲಿಗಳಾಗಿ ರಸ್ತೆಬದಿಯಲ್ಲಿ ಊಟ ಮಾಡಿ ಅಲ್ಲೆ ಮಲಗುವ ದೃಶ್ಯ ಎಂತಹವರನ್ನೂ ತಲೆ ತಗ್ಗಿಸುವಂತೆ ಮಾಡದಿರದು.   ಮಳೆ ಬಂದರೆ ಇವರನ್ನು ದೇವರೇ ಕಾಪಾಡಬೇಕು, ಬೆಳಿಗ್ಗೆ ಬಯಲು ಶೌಚ, ಸ್ನಾನವೂ ಇಲ್ಲದೆ ವಾಹನ ದಟ್ಟಣೆ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕುಡಿಯಲು ನೀರು ಸಿಗುವುದಿಲ್ಲ, ಕನಿಷ್ಠ ಸ್ಥಳಿಯವಾಗಿ ಶುಲ್ಕ ಪಾವತಿ ಶೌಚಾಲಯ ಮತ್ತು ಸ್ನಾನ ಗೃಹಗಳನ್ನಾದರೂ ನಿರ್ಮಿಸಿದರೆ ದೇಶ ಕಾಯ್ದಷ್ಟೆ ಸಾರ್ಥಕತೆ ಬರುವುದೆನೊ.   ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ.

ಪಕ್ಕದಲ್ಲೆ ಸಾಕಷ್ಟು ಸರ್ಕಾರಿ ಜಾಗ ಇದ್ದು, ಕನಿಷ್ಠ ಶೆಡ್ ನಿರ್ಮಾಣ ಮಾಡಿ, ಪಕ್ಕದಲ್ಲೆ ಒಂದೆರೆಡು ಶೌಚಾಲಯ ನಿರ್ಮಿಸಿದರೆ ಸಾಕಷ್ಟು ಅನುಕೂಲ ಆಗುವುದು ಎಂದು ಇಲ್ಲಿಗೆ ಬರುವವರು ಮನವಿ ಮಾಡಿದ್ದಾರೆ.  ಇನ್ನಾದರೂ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಇವರ ಗೋಳು ಕೇಳಿಸಿಕೊಂಡು ಕನಿಷ್ಠ ಸೌಲಭ್ಯ ನೀಡುವತ್ತ ಗಮನ ಹರಿಸುತ್ತಾರೆಯೇ ಕಾದು ನೋಡಬೇಕಿದೆ.   ಒಟ್ಟಾರೆ ದೇಶ ಕಾಯುವವರ ಸ್ಥಿತಿ ಇದಾದರೆ ಸಾಮಾನ್ಯರ ಗೋಳು ಕೇಳೊರ್ಯಾರು ಎಂಬಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin