ದೇಶದಲ್ಲಿ ಕಡ್ಡಾಯ ಮತದಾನ ಜಾರಿಯಾಗಬೇಕು : ಗೌರ್ನರ್ ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

Votrers-Day

ಬೆಂಗಳೂರು, ಜ.25-ದೇಶದಲ್ಲಿ ಮತದಾನ ಕಡ್ಡಾಯವಾಗಬೇಕು, ಮತದಾನ ತಪ್ಪಿಸಿದವರಿಗೆ ಶಿಕ್ಷೆ ವಿಧಿಸುವಂತಾಗಬೇಕು. ಈ ಮೂಲಕ ಜಾತಿ, ಮತ, ಲಿಂಗ, ಧರ್ಮದ ಬೇಧವಿಲ್ಲದೆ ಯೋಗ್ಯರನ್ನು ಆಯ್ಕೆ ಮಾಡುವಂತಾಗಬೇಕು ಎಂದು ರಾಜ್ಯಪಾಲ ವಜೂಬಾಯಿ ವಾಲಾ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತದಾನ ಕಡ್ಡಾಯವಾಗದ ಹೊರತು ಸೂಕ್ತ ಅಭ್ಯರ್ಥಿಗಳ ಆಯ್ಕೆ ನಡೆಯದು. ಗ್ರಾಮೀಣ ಪ್ರದೇಶಗಳಲ್ಲಿ ಶೇ.60ರಷ್ಟು ಮತದಾನ ನಡೆದರೂ, ಎಸಿ ಕಾರು, ಬಂಗಲೆಯಲ್ಲಿರುವವರು ಕೇವಲ ಟೀಕೆ ಮಾಡಿಕೊಂಡು ತಿರುಗುತ್ತಾರೆ. ಹಾಗಾಗಿ ಮತದಾನ ಕಡ್ಡಾಯಗೊಳ್ಳಬೇಕು. ಮತದಾನ ತಪ್ಪಿಸಿದವರೂ ಶಿಕ್ಷೆಯಾಗುವಂತಹ ಕಾನೂನು ರೂಪುಗೊಳ್ಳಬೇಕು ಎಂದರು.

ಅದೆಷ್ಟೋ ಜನ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುವುದಿಲ್ಲ. ಸಂವಿಧಾನ ಹಕ್ಕಿನ ಬಗ್ಗೆ ಪ್ರಶ್ನೆ ಕೇಳುವ ಜನ, ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ. ಹಕ್ಕುಗಳ ಜೊತೆಗೆ ಕರ್ತವ್ಯ ನಿಭಾಯಿಸುವ ಜವಾಬ್ದಾರಿ ಇರಬೇಕು. ಯಾರನ್ನು ಆಯ್ಕೆ ಮಾಡಬೇಕು, ಯಾರ ಆಯ್ಕೆ ಸೂಕ್ತ ಎಂಬುದರ ಬಗ್ಗೆ ಆಲೋಚಿಸಬೇಕು. ಕನಿಷ್ಠ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಕರ್ತವ್ಯವನ್ನು ಎಲ್ಲರೂ ನಿಭಾಯಿಸಬೇಕು.

ಸೂಕ್ತ ವ್ಯಕ್ತಿಗಳು ಸ್ಪರ್ಧಿಸಿಲ್ಲ ಎಂದಾದರೆ ಅದನ್ನು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡದೆ ನೋಟಾ ಒತ್ತಬಹುದಾಗಿದೆ. ಅದಕ್ಕಾಗಿ ಈ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಮತಗಟ್ಟೆಗೆ ಹೋಗುವ ಕೆಲಸವನ್ನು ಮತದಾರ ಮಾಡುವುದು ಅನಿವಾರ್ಯವಾಗಬೇಕೆಂದರು. ಮತದಾನವಿರುವ ದಿನ ಯಾರೂ ಹೊರಗಡೆ ಸುತ್ತಾಡಲು ಹೋಗಬೇಡಿ. ಬದಲಿಗೆ ಮತದಾನ ನಮ್ಮ ಕರ್ತವ್ಯ ಎಂದು ಭಾವಿಸಿ ಅದನ್ನು ನಿಭಾಯಿಸಿ. ಮತದಾನದ ಬಗ್ಗೆ ಜಾಗೃತಿಮೂಡಿಸುವುದು ಅನಿವಾರ್ಯ ಎಂದರು.

ರಾಜ್ಯದಲ್ಲಿ ಆರು ಕೋಟಿ ಜನರಿದ್ದು, ಶೇ.72 ರಷ್ಟು ಜನ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು ಸ್ಪರ್ಧಿಸುವ ಬಗ್ಗೆ ತಾರತಮ್ಯ ಬೇಡ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕ ಪಡೆಯುವವರಲ್ಲಿ ಮಹಿಳೆಯರೇ ಹೆಚ್ಚು ಮಂದಿ ಇದ್ದಾರೆ. ಅವರಿಗೆ ಸಾಮಥ್ರ್ಯವಿದೆ. ಅವಕಾಶ ಸಿಕ್ಕರೆ ಸಾಧನೆ ಮಾಡಿ ತೋರಿಸುತ್ತಾರೆ ಎಂದು ಪ್ರತಿಪಾದಿಸಿದರು.

ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಅನಿಲ್‍ಕುಮಾರ್ ಝಾ ಮಾತನಾಡಿ, ಕರ್ನಾಟಕದಲ್ಲಿ 4.80 ಕೋಟಿ ಮತದಾರರಿದ್ದು, ಹೊಸದಾಗಿ 7.35 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ನಂತರ 3.15 ಲಕ್ಷ ಮಂದಿ ಪಟ್ಟಿಯಿಂದ ಡಿಲಿಟ್ ಆಗಿದ್ದಾರೆ ಎಂದು ವಿವರಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದವರಿಗೆ ಪ್ರಶಸ್ತಿಪ್ರದಾನ ಮಾಡಲಾಯಿತು.  ಬಿಬಿಎಂಪಿ ಆಯುಕ್ತ ಮಂಜುನಾಥ್‍ಪ್ರಸಾದ್, ಜಿಲ್ಲಾಧಿಕಾರಿ ವಿ.ಶಂಕರ್ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin