ದೇಶದಲ್ಲೇ ಅತಿ ದೊಡ್ಡ ವಂಚನೆ : 50 ಲಕ್ಷ ಮಂದಿಗೆ 7,000 ಕೋಟಿ ರೂ.ಪಂಗನಾಮ

ಈ ಸುದ್ದಿಯನ್ನು ಶೇರ್ ಮಾಡಿ

Scam--01

ಮುಂಬೈ, ಡಿ.14-ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ದೇಶದ ಬಹು ದೊಡ್ಡ ವಂಚನೆ ಇದು. ಸುಮಾರು 50 ಲಕ್ಷಕ್ಕೂ ಅಧಿಕ ಹೂಡಿಕೆದಾರರಿಗೆ 7,035 ಕೋಟಿ ರೂ.ಗಳ ಪಂಗನಾಮ ಹಾಕಿರುವ ಪ್ಯಾನ್‍ಕಾರ್ಡ್ ಕ್ಲಬ್(ಪಿಸಿಎಲ್) ಹಗರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಆರ್ಥಿಕ ಅಪರಾಧಗಳ ನಿಯಂತ್ರಣ ಘಟಕ (ಎಕಾನಾಮಿಕ್ ಅಫೆನ್ಸ್ ವಿಂಗ್-ಇಒಡಬ್ಲ್ಯು) ತನಿಖೆಯನ್ನು ತೀವ್ರಗೊಳಿಸಿದೆ. ಲಕ್ಷಾಂತರ ಹೂಡಿಕೆದಾರರಿಗೆ ಬಹುಕೋಟಿ ರೂ.ಗಳನ್ನು ವಂಚನೆ ಮಾಡಿರುವ ಈ ಸಂಸ್ಥೆ ಮತ್ತು ಅದರ ಆರು ನಿರ್ದೇಶಕರ ವಿರುದ್ಧ ಇಒಡಬ್ಲ್ಯು ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಭಾರೀ ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತ ಷೇರುಗಳು ಮತ್ತು ವಿನಿಮಯ ಮಂಡಳಿ(ಸೆಬಿ) ಈ ಹಿಂದೆ ತನ್ನ ಸ್ವತ್ತುಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿತ್ತು. ಅಲ್ಲದೆ, ಅಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಮರುಪಾವತಿ ಮಾಡಲು ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರನ್ನು ಸಹ ನೇಮಕ ಮಾಡಿತ್ತು.

ಕಂಪನಿ ಒಡ್ಡಿದ ಆಕರ್ಷಕ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿಗಳನ್ನು ತೊಡಗಿಸಿ ಭಾರೀ ನಷ್ಟ ಅನುಭವಿಸಿರುವ ಬಂಡವಾಳ ಹೂಡಿಕೆದಾರರ ಹಿತರಕ್ಷಣೆಗಾಗಿ ಇಒಡಬ್ಲ್ಯು ಮತ್ತು ಸೆಬಿ ಮುಂದಾಗಿದೆ.  ಮುಂಬೈನ ದಾದರ್ ನಿವಾಸಿ ನರೇಂದ್ರ ನಟೌಕರ್ ಎಂಬ ಹೂಡಿಕೆದಾರರು ಪಿಸಿಎಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಭಾರೀ ವಂಚನೆಯ ಕರ್ಮಕಾಂಡ ಬೆಳಕಿಗೆ ಬಂದಿತು. ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವ ಮತ್ತು ಹಾಲಿಡೇ ಪ್ಯಾಕೆಜ್‍ಗಳ ಆಕರ್ಷಕ ಯೋಜನೆಯೊಂದಿಗೆ ಪಿಸಿಎಲ್ ತಮ್ಮ ಗ್ರಾಹಕರಿಗೆ ಆಫರ್ ನೀಡಿತ್ತು. ಅದರಂತೆ ಅಸಂಖ್ಯಾತ ಮಂದಿಯನ್ನು ಸದಸ್ಯತ್ವ ಮಾಡಿಕೊಂಡು ಭಾರೀ ಮೊತ್ತವನ್ನು ಬಂಡವಾಳ ರೂಪದಲ್ಲಿ ವಸೂಲಿ ಮಾಡಿತ್ತು ಎಂದು ಇಒಡಬ್ಲ್ಯು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಧಿಕ ಲಾಭ ನೀಡುವ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ಪೀಕಿಸಿದ್ದ ಕಂಪನಿ ತನ್ನ ಭರವಸೆಗಳನ್ನು ಈಡೇರಿಸಲಿಲ್ಲ. ಅಲ್ಲದೇ ಗ್ರಾಹಕರಿಗೆ ಹಾಲಿಡೇ ಪ್ಯಾಕೆಜ್‍ನಂಥ ಕನಿಷ್ಠ ಸೌಲಭ್ಯ-ಸವಲತ್ತುಗಳನ್ನು ನೀಡಲಿಲ್ಲ. ಈ ಸಂಬಂಧ ಹೂಡಿಕೆಗಾರರು ಮತ್ತು ಗ್ರಾಹಕರು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ದೂರುಗಳನ್ನು ನೀಡಿದರು. ತನಿಖೆ ಆರಂಭಿಸಿದ ಅಧಿಕಾರಿಗಳಿಗೆ ವಂಚನೆಯ ವಿರಾಟ್ ರೂಪ ಕಂಡುಬಂದಿತು. ಸಾಮೂಹಿಕ ಸಂಗ್ರಹ ಯೋಜನೆ (ಕಲೆಕ್ಟಿವ್ ಇನ್‍ವೆಸ್ಟ್ ಸ್ಕೀಮ್-ಸಿಐಎಸ್) ನಡೆಸುತ್ತಿದ್ದ ಸಂಸ್ಥೆಯು ಇದಕ್ಕಾಗಿ ಸೆಬಿ ಅನುಮತಿ ಪಡೆಯದೇ ಇರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಹಂತ ಹಂತದ ವಿಚಾರಣೆ ನಡೆಸುತಾ ಹೋದಂತೆ ಬ್ರಹ್ಮಾಂಡ ವಂಚನೆ ಪ್ರಕರಣಗಳು ಅನಾವರಣಗೊಂಡವು. 50 ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಯಲ್ಲಿ ಬಂಡವಾಳ ಹೂಡಿದ್ದು ಶೇ.1ರಷ್ಟು ಹೂಡಿಕೆದಾರರಿಗೆ ಕಂಪನಿ ಸೌಲಭ್ಯ ಒದಗಿಸಿದ್ದು, 7,000 ಕೋಟಿ ರೂ.ಗಳ ದೊಡ್ಡ ವಂಚನೆ ಎಸಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin