ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೈಲೆಟ್ ಗನ್ ಬದಲು ಪಾವಾ ಶೆಲ್ ಗಳ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

Pava-Shells

ನವದೆಹಲಿ, ಆ.26- ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಳಸುತ್ತಿರುವ ಪೈಲೆಟ್ ಗನ್ ಪ್ರಯೋಗಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗ ಹುಡುಕಿದೆ.  ಪೈಲೆಟ್ ಗನ್ ಬದಲು ಪಾವಾ ಶೆಲಗಳನ್ನು ಬಳಸಲು ತಜ್ಞರ ಸಮಿತಿಯು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಖಾರದ ಪುಡಿ ಇರುವ ಈ ಪಾವಾ ಶೆಲಗಳು ಹಿಂಸೋದ್ರಿಕ್ತ ಗುಂಪನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ವಾರದ ಹಿಂದಷ್ಟೇ ಈ ಪಾವಾ ಶೆಲ್ ಸೇರಿದಂತೆ ವಿವಿಧ ಸಾಧನಗಳನ್ನು ಪ್ರಾಯೋಗಿಕವಾಗಿ ಬಳಸಿ ಅದರ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಪಾವಾ ಶೆಲ್ ಹೆಚ್ಚು ಸೂಕ್ತವೆಂಬುದು ಖಚಿತವಾದ ಬಳಿಕ ತಜ್ಞರ ಸಮಿತಿಯು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಕಾಶ್ಮೀರ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೈಲೆಟ್ ಗನ್ ಬಳಕೆ ರೂಢಿಯಲ್ಲಿದೆ. ಇದು ಕಣ್ಣು ಮತ್ತಿತರ ಸೂಕ್ಷ್ಮ ಅಂಗಗಳಿಗೆ ಖಾಯಂ ಘಾಸಿಯುಂಟು ಮಾಡುತ್ತದೆ ಎಂಬ ಕಾರಣದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಚಿಲ್ಲಿ ಗ್ರಿನೇಡ್, ಟಿಯರ್ಗ್ಯಾಸ್ ಮೊದಲಾದ ಸಾಧನಗಳೂ ಗುಂಪು ಚದುರಿಸುವ ಕಾರ್ಯಕ್ಕೆ ಬಳಕೆಯಾಗುತ್ತಿವೆ.   ಮಾನವನ ಅಂಗಗಳಿಗೆ ದೀರ್ಘಕಾಲ ಹಾನಿಯುಂಟು ಮಾಡುವ ಇವುಗಳ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಹೀಗಾಗಿ, ಪರ್ಯಾಯ ಸಾಧನಗಳನ್ನು ಹುಡುಕಲು ಗೃಹ ಸಚಿವಾಲಯವು ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ಪಾವಾ ಶೆಲ್ ಸೇರಿದಂತೆ ಹಲವು ಸಾಧನಗಳ ಪಟ್ಟಿಯನ್ನೂ ತಯಾರಿಸಿ ಗೃಹ ಸಚಿವಾಲಯಕ್ಕೆ ಕಳುಹಿಸಿದೆ ಎನ್ನಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin