ದೇಶದ್ರೋಹಿಗಳ ಬಂಧನಕ್ಕೆ ಆಗ್ರಹಿಸಿ ತೀವ್ರಗೊಂಡ ಎಬಿವಿಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

aaa

ಬೆಂಗಳೂರು, ಆ.17- ಕಾಶ್ಮೀರ ಗಲಭೆ ಸಂತ್ರಸ್ತರಿಗಾಗಿ ಬ್ರೋಕನ್ ಫ್ಯಾಮಿಲೀಸ್ (ಒಡೆದ ಕುಟುಂಬಗಳು) ಹೆಸರಿನಲ್ಲಿ ಕಾರ್ಯಾಗಾರ ನಡೆಸುವ ಮೂಲಕ ದೇಶ ವಿರೋಧಿ ಘೋಷಣೆ, ಭಾಷಣ, ಸೇನೆಗೆ ಅವಮಾನ ಮಾಡಿರುವ ಆಮ್ನೆಸ್ಟಿ ಸಂಘಟನೆಯನ್ನು ನಿಷೇಧ ಮಾq ಬೇಕು. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಎಬಿವಿಪಿಯ ಪ್ರತಿಭಟನೆ ರಾಜ್ಯಾದ್ಯಂತ ತೀವ್ರಗೊಂಡಿದೆ.  ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಇಂದು ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಿ ದೇಶ ವಿರೋಧಿಗಳನ್ನು ಬಂಧಿಸಬೇಕು. ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ABVP-1

ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಬಳ್ಳಾರಿ, ಕಾರವಾರ, ಧಾರವಾಡ, ಬಾಗಲಕೋಟೆ, ಬೀದರ್, ಯಾದಗಿರಿ, ತುಮಕೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆಮ್ನೆಸ್ಟಿ ಸಂಘಟನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.  ಹಲವೆಡೆ ರಸ್ತೆ ತಡೆ ನಡೆಸಿದರು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಚಿಕ್ಕೋಡಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಮೈಸೂರಿನಲ್ಲಿ ಬೃಹತ್ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದೇಶದ್ರೋಹಿಗಳನ್ನು ಬಂಧಿಸುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾರ್ಯಕರ್ತರು ಸರ್ಕಾರದ ಅಣಕು ಶವಯಾತ್ರೆ ನಡೆಸಿದರು.

 

ABVP-2
ಕಾರವಾರ, ಬಾಗಲಕೋಟೆ, ಬೀದರ್, ಯಾದಗಿರಿ, ತುಮಕೂರಿನಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ, ಕೆಆರ್ ಸರ್ಕಲ್, ಚಾಲುಕ್ಯ ವೃತ್ತ, ಸೌತ್ಎಂಡ್ ವೃತ್ತ ಮುಂತಾದ ಕಡೆ ಎಬಿವಿಪಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಎಬಿವಿಪಿ ಮುಖಂಡ ಸಚಿನ್ ರಾಥೋಡ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.  ಸೌತ್ಎಂಡ್ ವೃತ್ತದಲ್ಲಿ ಹಾಗೂ ದೇವನಹಳ್ಳಿಯ ಸರ್ಕಾರಿ ಪದವಿ ಕಾಲೇಜು ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಆಮ್ನೆಸ್ಟಿ ಹಠಾವೊ ದೇಶ್ ಬಚಾವೊ ಎಂಬ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದರು.  ಕಳೆದ ಶನಿವಾರ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಜಾದ್ ಹೆಸರಿನಲ್ಲಿ ಭಾರತೀಯ ಸೇನೆಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿದ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ABVP-3
ದೇಶದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ವಿಪರ್ಯಾಸವೆಂದರೆ ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿ ನಮ್ಮ ವಿರುದ್ಧವೇ ದೂರು ದಾಖಲಿಸಲಾಗಿದೆ ಎಂದು ಎಬಿವಿಪಿ ಮುಖಂಡ ವಿನಯ್ ಬಿದರೆ ಆರೋಪಿಸಿದರು.  ನಮ್ಮ ಹೋರಾಟ ದೇಶ ವಿರೋಧಿಗಳ ವಿರುದ್ಧ. ಪೊಲೀಸರು ಅವರ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ದೇಶ ವಿರೋಧಿಯ ಯಾವುದೇ ಚಟುವಟಿಕೆಗಳನ್ನೂ ನಾವು ಸಹಿಸುವುದಿಲ್ಲ. ಆಮ್ನೆಸ್ಟಿ ಸಂಘಟನೆ ಮೊದಲಿನಿಂದಲೂ ವಿವಾದದ ಸಂಘಟನೆಯಾಗಿದೆ. ಇದೇ ಮೊದಲೇನಲ್ಲ. ಶ್ರೀಲಂಕಾ, ಅಸ್ಸೋಂ, ಅಮೆರಿಕ ಮುಂತಾದ ಕಡೆ ದೇಶ ರಕ್ಷಣೆ ಹಾಗೂ ಭದ್ರತೆ ಕಡೆಗಣಿಸಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಇಂತಹ ಸಂಘಟನೆಯನ್ನು ನಮ್ಮ ದೇಶದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು. ನಿನ್ನೆ ಎಬಿವಿಪಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ರಾಜಭವನ ಮತ್ತು ಪೊಲೀಸ್ ಆಯುಕ್ತರ ಕಚೇರಿಗೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.   ಎಬಿವಿಪಿ ಕಾರ್ಯಕರ್ತರು ಇಂದು ಪೊಲೀಸರಿಗೆ ಯಾವುದೇ ಸೂಚನೆ ನೀಡದೆ ಅಸಹಕಾರ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು.

ABVP-4

ABVP-5

ABVP-6

ABVP-7

ABVP-8

 

► Follow us on –  Facebook / Twitter  / Google+

Facebook Comments

Sri Raghav

Admin