ದೇಶದ್ರೋಹಿಗಳ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ABVP-1

ಬೆಂಗಳೂರು, ಆ.16- ದೇಶ ವಿರೋಧಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು, ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸಂಸ್ಥೆಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಮತ್ತು ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಇಂದು ನಡೆದಿದೆ.

ABVP-3

ಕಳೆದ ಶನಿವಾರ ದೇಶವಿರೋಧಿ ಘೋಷಣೆ ಪ್ರಕರಣ ನಡೆದಿದ್ದರೂ ಹಾಗೂ ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರೂ ಪೊಲೀಸರು ಅಂತಹ ಪ್ರಕರಣದಲ್ಲಿ ಪಾಲ್ಗೊಂಡವರನ್ನು ಬಂಧಿಸಿಲ್ಲ.   ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಸುಮಾರು 300 ರಿಂದ 400 ಮಂದಿ ಎಬಿವಿಪಿ ಕಾರ್ಯಕರ್ತರು ಆರ್.ಸಿ.ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಹೊರಟರು. ಪ್ರತಿಭಟನಾಕಾರರು ನೆಹರೂ ತಾರಾಲಯದ ಬಳಿ ಬಂದಾಗ ಅವರನ್ನು ಪೊಲೀಸರು ತಡೆದರು.  ಈ ಸಂದರ್ಭ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ವಿಕೋಪಕ್ಕೆ ಹೋಗಿ ತಳ್ಳಾಟ, ನೂಕಾಟಗಳು ನಡೆದು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು.

ABVP-2

ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭ ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ನಂತರ ಕೆಲವು ಎಬಿವಿಪಿ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಆದರೂ ಕೂಡ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ನಿಲ್ಲಿಸಲಿಲ್ಲ.ಸ್ಥಳಕ್ಕೆ ಗೃಹ ಸಚಿವರು ಬರಬೇಕು. ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಬಿಗಿ ಪಟ್ಟು ಹಿಡಿದರು. ಆಗ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಆಗ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮೀಷನರ್ ಚರಣ್ರೆಡ್ಡಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಲಾಗುವುದು ಎಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.ವಾಹನ ಸವಾರರು ತೊಂದರೆಗೆ ಒಳಗಾದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ನೆಹರೂ ತಾರಾಲಯದ ಬಳಿಗೆ ಸ್ಥಳಾಂತರಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 

ABVP-4

ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡನೀಯ: ಶೆಟ್ಟರ್
ಬೆಂಗಳೂರು, ಆ.16- ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆದಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.  ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ದ್ರೋಹ ಎಸಗಲಾಗಿದೆ. ರಾಷ್ಟ್ರೀಯತೆ ಮತ್ತು ಸೇನೆಯನ್ನು ಪ್ರಶ್ನಿಸಲಾಗಿದೆ. ಇದು ರಾಜದ್ರೋಹಕ್ಕೆ ಸಮಾನವಾದ ಅಪರಾಧ, ರಾಜ್ಯ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಎಬಿವಿಪಿ ನೀಡಿದ್ದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಇದು ಖಂಡನೀಯ ಕೂಡಲೇ ಸರ್ಕಾರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಧಾರವಾಡ ಜಿಲ್ಲೆಯ ಯಮನೂರಿನಲ್ಲಿ ಮಾಡಿದ ಲಾಠಿ ಚಾರ್ಜ್ ಪ್ರಕರಣ ಹಸಿಯಾಗಿರುವಾಗಲೇ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದು ಸರಿಯಲ್ಲ ಎಂದು ಅವರು, ಯಮನೂರಿನ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಬೇಸರತ್ತಾಗಿ ಹಿಂಪಡೆಯಬೇಕು. ಈ ಮೊದಲು ನಡೆದು ಸರ್ವಪಕ್ಷ ಸಭೆಯಲ್ಲಿ ನಾವು ಒತ್ತಾಯ ಮಾಡಿದ್ದೆವು. ರಾಜ್ಯ ಸರ್ಕಾರವೂ ಭರವಸೆ ನೀಡಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ತಾಂತ್ರಿಕ ಕಾರಣಗಳನ್ನು ಹೇಳಲಾಗುತ್ತಿದೆ. ಇದು ಸರಿಯಲ್ಲ. ಅಮಾಯಕರು ಮತ್ತು ಮುಗ್ಧರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೊಲೆಯತ್ನದಂತಹ ಆರೋಪಗಳನ್ನು ಹೊರಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ABVP-5

► Follow us on –  Facebook / Twitter  / Google+

Facebook Comments

Sri Raghav

Admin