ದೇಶದ ಉದ್ದಗಲಕ್ಕೂ ಶಿವನಾಮಸ್ಮರಣೆ, ಪ್ರತಿಯೊಬ್ಬರ ಬಾಯಲ್ಲೂ ಪಂಚಾಕ್ಷರಿ ಮಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Om-Namah-Shivaya

ಬೆಂಗಳೂರು, ಫೆ.24-ಮಹಾಶಿವರಾತ್ರಿ ಪ್ರಯುಕ್ತ ದೇಶಾದ್ಯಂತ ಏಕಲಿಂಗದಿಂದ ಹಿಡಿದು ಕೋಟಿ ಲಿಂಗದವರೆಗೆ ಶಿವನ ಆರಾಧನೆ ನಡೆಯಿತು. ಶಿವ… ಶಿವ… ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ. ಶಿವನಾಮಸ್ಮರಣೆಯೊಂದೇ ಜಗತ್ತಿನ ಶಕ್ತಿ. ಮಹಾಶಿವರಾತ್ರಿ ದಿನವಾದ ಇಂದು ದೇಶದ ಉದ್ದಗಲಕ್ಕೂ ಶಿವನಾಮಸ್ಮರಣೆಯ ಝೇಂಕಾರ ಕೇಳಿಬರುತ್ತಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಶಿವನಿಗೆ ಮಹಾಶಿವರಾತ್ರಿ ಶುಭದಿನದಂದು ಪತ್ರ, ಪುಷ್ಪ, ಫಲ ಸಮರ್ಪಿಸಿದರೆ ಕೋಟಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.  ಜಾಗರಣೆ, ಉಪವಾಸದೊಂದಿಗೆ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಾ ಯೋಗಮುದ್ರೆಯಲ್ಲಿ ಕುಳಿತ ಪರಮೇಶ್ವರನನ್ನು ಪೂಜಿಸುವುದು ಮಹಾಶಿವರಾತ್ರಿಯ ವೈಶಿಷ್ಟ್ಯ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ದೇಶದ ಎಲ್ಲಾ ಶಿವಾಲಯಗಳಲ್ಲಿ, ವಿವಿಧ ದೇವಾಲಯಗಳಲ್ಲಿ ಶಿವನ ಆರಾಧನೆ ಭಕ್ತಿಯಿಂದ ನಡೆಯುತ್ತದೆ. ಶಿವನನ್ನು ಒಲಿಸಿಕೊಳ್ಳಲು ಜನ ಧ್ಯಾನ, ಭಜನೆ ಜಾಗರಣೆಯ ಮೊರೆ ಹೋಗುತ್ತಾರೆ.   ಮಹಾಶಿವರಾತ್ರಿಯನ್ನು ಮಾಘ ಬಹುಳ ಚತುರ್ದಶಿಯ ದಿನ ಆಚರಿಸಲಾಗುತ್ತದೆ. ವ್ರತಗಳ ರಾಜ ಎಂದೇ ಶಿವನನ್ನು ಕರೆಯಲಾಗುತ್ತದೆ. ಸಮುದ್ರ ಮಥನ ಕಾಲದಲ್ಲಿ ಉದ್ಭವವಾದ ಕಾಲಕೂಟ ವಿಷವನ್ನು ಕುಡಿದು ವಿಶ್ವವನ್ನು ರಕ್ಷಿಸಿ ವಿಷಕಂಠನಾದ ಶಿವನನ್ನು ಆರಾಧಿಸುವ ಮಹಾಶಿವರಾತ್ರಿಯ ಎಂದು ಈ ದಿನ ಶಿವ ತಾಂಡವ ನೃತ್ಯ ಮಾಡಿದನೆಂದೂ ಕೂಡ ಹೇಳಲಾಗುತ್ತದೆ.

Om-Namah-Shivaya-1

ಪಾರ್ವತಿಯೊಡನೆ ಇದ್ದಾಗ ಈತ ಸಗುಣಬ್ರಹ್ಮ. ಇಲ್ಲದಿದ್ದಾಗ ಲಿಂಗರೂಪಿ. ಲಿಂಗಧಾರಣೆ ಮಾಡಿದ ದಿನವೇ ಮಹಾಶಿವರಾತ್ರಿ ಎಂದೂ ಕೂಡ ಹೇಳಲಾಗುತ್ತದೆ.  ಹಿಮಾಲಯದ ಕೈಲಾಸ  ಪರ್ವತದಿಂದ ಹಿಡಿದು ಕನ್ಯಾಕುಮಾರಿವರೆಗಿರುವ ಎಲ್ಲಾ ದೇವಾಲಯಗಳಲ್ಲಿ ನಡೆಯುವ ಶಿವನ ಆರಾಧನೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸುತ್ತಾರೆ.
ಅಭಿಷೇಕ ಪ್ರಿಯನಾದ ಈಶ್ವರನಿಗೆ ಮುರುಡೇಶ್ವರ, ಗೋಕರ್ಣ, ಕೋಟಿಲಿಂಗೇಶ್ವರ, ಮಹಾಬಲೇಶ್ವರ, ಗವಿಗಂಗಾಧರೇಶ್ವರ ವಿವಿಧ ಈಶ್ವರನ ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕಗಳು ನಡೆದವು.

ಇತ್ತ ಹೈಟೆಕ್ ಸಿಟಿ ಬೆಂಗಳೂರು, ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮೈಸೂರಿನಲ್ಲಿರುವ ಗಣಪತಿ ಸಚ್ಚಿದಾನಂದಾಶ್ರಮದ ಶಿವನ ದೇವಾಲಯದಲ್ಲಿ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ಈಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿದರು.  ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೇ ರುದ್ರಾಭಿಷೇಕ, ವಿಶೇಷ ಪೂಜೆಗಳು ನಡೆದು 11 ಕೆಜಿ ತೂಕದ ಚಿನ್ನದ ಕೊಳಗವನ್ನು ಶಿವಲಿಂಗಕ್ಕೆ ತೊಡಿಸಲಾಯಿತು.

ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಮಾತ್ರ ಈ ಕೊಳಗವನ್ನು ಶಿವನಿಗೆ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.  ರಾಮಾನುಜ ರಸ್ತೆಯಲ್ಲಿರುವ ಗುರುಕುಲದಲ್ಲಿನ 108 ಶಿವಲಿಂಗಗಳಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಎದುರಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾಮೇಶ್ವರಿ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು.   ಬೆಂಗಳೂರು ನಗರದಲ್ಲಿರುವ ಕಾಡುಮಲ್ಲೇಶ್ವರ ದೇವಾಲಯ, ಗವಿ ಗಂಗಾಧರೇಶ್ವರ, ಕಾಶಿವಿಶ್ವೇಶ್ವರ, ಏರ್‍ಪೋರ್ಟ್ ರಸ್ತೆಯಲ್ಲಿರುವ ಶಿವ ದೇವಾಲಯ, ಇಂದಿರಾನಗರದ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿರುವ ಈಶ್ವರ ದೇವಾಲಯ, ಚಾಮರಾಜಪೇಟೆಯ ಕಾಶಿವಿಶ್ವನಾಥ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ, ಜರಗನಹಳ್ಳಿಯ ಗಂಗಾಧರೇಶ್ವರ, ರಾಜಾಜಿನಗರದ ಶ್ರೀರಾಮಮಂದಿರದ ಶಿವಾಲಯ ಸೇರಿದಂತೆ ಎಲ್ಲೆಡೆ ವಿಶೇಷ ಪೂಜೆಗಳು ನೆರವೇರಿದವು.

ಅಲ್ಲದೆ, ಮಹಾಶಿವರಾತ್ರಿ ಜಾಗರಣೆಗಾಗಿ ನಗರದ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.   ರಾತ್ರಿ 7.30ರಿಂದ ಮಂತ್ರಿಮಾಲ್ ಎದುರಿನ ಸಿರೂರು ಪಾರ್ಕ್ ಆಟದ ಮೈದಾನದಲ್ಲಿ ಜಾಣ ಜಾಣೆಯರ ನಗೆ ಜಾಗರಣೆ ನಡೆಯಲಿದೆ.  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಅಧ್ಯಕ್ಷತೆ, ಶ್ರೀ ದೇವಶ್ರೀ ಗುರುಜೀ ಸಾನಿಧ್ಯ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಚಿವ ಎಂ.ಆರ್.ಸೀತಾರಾಮ್, ಮೇಯರ್ ಜಿ.ಪದ್ಮಾವತಿ, ವಿಶೇಷ ಆಹ್ವಾನಿತರಾಗಿ ಎಂಎಲ್‍ಸಿ ಎಂ.ಸಿ.ಲಕ್ಷ್ಮೀನಾರಾಯಣ, ಡಿ.ಎಸ್.ವೀರಯ್ಯ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಆಗಮಿಸಲಿದ್ದಾರೆ.

ರಾತ್ರಿ 7.30ಕ್ಕೆ ರಾಗಿಣಿ ಸಂಗೀತ ನೃತ್ಯಾಲಯದವರಿಂದ ಶಿವತಾಂಡವ ನೃತ್ಯ, ವೈ.ವಿ.ಗುಂಡೂರಾವ್, ದ್ವಾರಕನಾಥ್, ಗುರುದತ್‍ರಾವ್ ಅವರಿಂದ ಯಾರು ಹಿತವರು ನಿಮಗೆ ಈ ಮೂವರೊಳಗೆ ಹಾಸ್ಯ ಕಾರ್ಯಕ್ರಮ ಇದೆ.  ರಾತ್ರಿ 8ಕ್ಕೆ ಪ್ರೊ.ಕೃಷ್ಣೇಗೌಡರಿಂದ ಹಾಸ್ಯ ಚಟಾಕಿ, ರಾತ್ರಿ 11.30ಕ್ಕೆ ಪ್ರಹ್ಲಾದಾಚಾರ್ಯ, ಪೂರ್ಣಿಮಾ ಆಚಾರ್ಯ ಅವರಿಂದ ಜಾದೂ ಪ್ರದರ್ಶನ, 9ಕ್ಕೆ ಮಿಮಿಕ್ರಿ, ರಾತ್ರಿ 12 ಗಂಟೆಗೆ ಮಿಡ್‍ನೈಟ್ 12 ಕಾರ್ಯಕ್ರಮ ಜರುಗಲಿದೆ.  ರಾತ್ರಿ 12.30ಕ್ಕೆ ನರಸಿಂಹಜೋಷಿ, ಪ್ರಾಣೇಶ್, ಬಸವರಾಜ್ ಮಹಾಮನಿ ಅವರಿಂದ ಹಾಸ್ಯ ಕಾರ್ಯಕ್ರಮ, ರಾತ್ರಿ 2.30ಕ್ಕೆ ಕೊನೆ ನಮಸ್ಕಾರ ನಾಟಕ ಪ್ರದರ್ಶನ ಇರುತ್ತದೆ.

ಜ್ಞಾನಭಾರತಿ ಆವರಣದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಾಲಯವು ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ 7.30ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ.  ರಾತ್ರಿ 9.30ಕ್ಕೆ ಹರಿಕಥೆ ಇರುತ್ತದೆ. ಮರುದಿನ ಬೆಳಗ್ಗೆ ಮಹಾಮಂಗಳಾರತಿ ಬೆಳಗ್ಗೆ 7ಕ್ಕೆ ಅನ್ನದಾಸೋಹ ನಡೆಯುತ್ತದೆ.

ಪರಮೇಶ್ವರನ ಆರಾಧನೆ:

ಜೆ.ಪಿ.ನಗರ 2ನೇ ಹಂತದಲ್ಲಿರುವ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ಸಂಜೆ 6ರಿಂದ ಪರಮೇಶ್ವರನ ಆರಾಧನೆ ನಡೆಯಲಿದೆ.  ರೋಹಿತ್ ಭಟ್ ಮತ್ತು ತಂಡದಿಂದ ಗಾನವೈಭವ, ಸಹನಾರಿಂದ ಭಕ್ತಿಸುಧೆ, ಅನೀಶ್ ವಿದ್ಯಾಶಂಕರ್‍ರಿಂದ ಪಿಟೀಲುವಾದನ, ಎಂ.ಡಿ.ಪಲ್ಲವಿ ಅರುಣ್‍ರಿಂದ ಗಾನಲಹರಿ, ಅಸಾದುಲ್ಲಾ ಬೇಗ್ ಮತ್ತು ತಂಡದವರಿಂದ ಹಾಸ್ಯ ರಂಜನೆ, ಬಿಂಕ ಬಿನ್ನಾಣರು ತಂಡದಿಂದ ಹಾಸ್ಯ ನಾಟಕ ಗುರುಶಿಷ್ಯರು, ಪ್ರಭಾತ್ ಆಟ್ರ್ಸ್ ಇಂಟರ್ ನ್ಯಾಷನಲ್ ಅವರಿಂದ ಕಥಾಸ್ತ್ರ, ನೃತ್ಯ ಕಾವ್ಯಾ ಕಥಾ ಪ್ರದರ್ಶನ ನಡೆಯಲಿದೆ.

ಮೈಸೂರಿನೆಲ್ಲೆಡೆ ಶಿವನಿಗೆ ವಿಶೇಷ ಪೂಜೆ

ಮೈಸೂರು,ಫೆ.24- ಮಹಾಶಿವರಾತ್ರಿ ಪ್ರಯುಕ್ತ ನಗರದ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.   ನಗರದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶಿವನ ದೇವಾಲಯದಲ್ಲಿ ಸಾವಿರಾರು ಭಕ್ತರು ಸಾಲುಗಟ್ಟಿ ವಿಶೇಷ ಪೂಜೆ ಸಲ್ಲಿಸಿದರು.   ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗಿನಿಂದಲೇ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆಯಿತು. 11 ಕೆಜಿ ತೂಕದ ಚಿನ್ನದ ಕೊಳಗವನ್ನು ಶಿವಲಿಂಗಕ್ಕೆ ಅರ್ಪಿಸಲಾಯಿತು.   ಈ ಚಿನ್ನದ ಕೊಳಗದಲ್ಲಿ ಶಿವನ ಮುಖವಾಡವಿದ್ದು , ತಲೆ ಮೇಲೆ ಗಂಗೆ ಮುತ್ತಿನ ಎರಡು ಲೋಲಾಕ್‍ಗಳು, ಪಚ್ಚೆಕಲ್ಲಿನ ಮೂಗುತಿ, ತಾಟಕ ಹಾಗೂ ಬೆಳ್ಳಿಯ ಅರ್ಧಚಂದ್ರವಿದ್ದು, ಇದನ್ನು ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಮಾತ್ರ ಶಿವನಿಗೆ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಈ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.   ರಾಮಾನುಜ ರಸ್ತೆಯಲ್ಲಿರುವ ಗುರುಕುಲದಲ್ಲಿನ 108 ಶಿವಲಿಂಗಗಳಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಎದುರಿನಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಕಾಮೇಶ್ವರ-ಕಾಮೇಶ್ವರಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಪೂಜೆ ಸಲ್ಲಿಸಲಾಗುತ್ತಿದ್ದು , ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು.   ಇಂದು ಬೆಳಗ್ಗೆಯಿಂದ ನಾಳೆ ಬೆಳಗಿನ ಜಾವದವರೆಗೂ ನಗರದ ಎಲ್ಲಾ ಶಿವನ ದೇವಾಲಯಗಳ ವಿಶೇಷ ಪೂಜೆ ನಡೆಯಲಿದ್ದು , ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿಬಂದೋಬಸ್ತ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಾದ್ಯಂತ ಶಿವರಾತ್ರಿ ಸಡಗರ
ತುಮಕೂರು, ಫೆ.24- ಜಿಲ್ಲೆಯಾದ್ಯಂತ ವಿವಿಧ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ ಎಲ್ಲೆಡೆ ಕಂಡು ಬಂತು. ಹರನನ್ನು ಪೂಜಿಸುವ ಶುಭರಾತ್ರಿ ಇರುಳಲ್ಲಿ ಭಜಿಸುವ ಆ ರಾತ್ರಿ ಎನ್ನುವ ಶಿವನ ಭಜನೆಯೊಂದಿಗೆ ಭಕ್ತರು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಿದರು.  ಹಿಂದೂ ಧರ್ಮದಲ್ಲಿ ಒಂದೊಂದು ಹಬ್ಬಗಳಿಗೂ ತನ್ನದೇ ಆದ ಪ್ರಾಶಸ್ತ್ಯ ಇದ್ದು, ಶಿವರಾತ್ರಿಯಲ್ಲಿ ಶಿವಸ್ಮರಣೆ ಮಾಡಿದರೆ ರಾಮನವಮಿಯಲ್ಲಿ ರಾಮಸ್ಮರಣೆ ಮಾಡುತ್ತಾರೆ. ಈ ಎಲ್ಲಾ ದೇವರುಗಳ ಹೆಸರಿನಲ್ಲಿ ಹಬ್ಬಗಳನ್ನು ಆಚರಿಸುವುದು ರೂಢಿಯಲ್ಲಿದ್ದು, ಮಹಾಶಿವರಾತ್ರಿಯಂದು ಇಡೀ ದಿನ ಶಿವ ದೇವಾಲಯಗಳಲ್ಲಿ ಶಿವಲಿಂಗಗಳಿಗೆ ವಿಶೇಷ ಪೂಜೆ ನೆರವೇರಿಸುವುದು ಮನೆ ಮನೆಗಳಲ್ಲಿ ಶಿವ ಜಪ ಪಟಿಸುವುದಾಗಿದೆ.

ಶಿವರಾತ್ರಿ ವಿಶೇಷವೆಂದರೆ ಉಪವಾಸ ಜಾಗರಣೆಯ ಜೊತೆಗೆ ಶಿವ ದೇವಾಲಯಗಳಿಗೆ ಹೋಗಿ ಪೂಜೆ ಉತ್ಸವಗಳು, ಅಭಿಷೇಕದಲ್ಲಿ ಭಾಗವಹಿಸುವುದೇ ಆಗಿದೆ.  ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಿಂದ ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ಸಾಮೂಹಿಕ ಅಭಿಷೇಕ ಅರ್ಚನೆಗಳಲ್ಲಿ ಭಾಗವಹಿಸುತ್ತಿದ್ದರು.
ಶಿವನಿಗೆ ಪ್ರಿಯವಾದ ಪತ್ರೆ ಬಿಲ್ವಪತ್ರೆಯಾಗಿದ್ದು, ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡಿ ಎಳನೀರ ಹಾಲಾಭಿಷೇಕ ಮಾಡಿದರೆ ಪುಣ್ಯಪ್ರಾಪ್ತಿ ದೊರೆಯುತ್ತದೆ ಎನ್ನುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಅಪಾರ ಸಂಖ್ಯೆಯ ಭಕ್ತರು ಸಾಲುಗಟ್ಟಿ ನಿಂತು ಶಿವನಿಗೆ ಬಿಲ್ವಾರ್ಚನೆ ಹಾಗೂ ಸಾಮೂಹಿಕ ಅಭಿಷೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿವನದರ್ಶನ ಪಡೆದರು.

ಎಡಿಯೂರಿನ ಪ್ರಸಿದ್ಧ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆದವು, ಸಾವಿರಾರು ಭಕ್ತರು ಎಡಿಯೂರಿಗೆ ಬಂದು ದೇವರ ದರ್ಶನ ಪಡೆದರು. ಮಧುಗಿರಿಯ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಶುಕ್ರವಾರ ಶಿವನ ಜಪದಲ್ಲಿ ಭಕ್ತರು ಮುಳುಗಿದ್ದುದು ಸಾಮಾನ್ಯವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin