ದೇಶಾದ್ಯಂತ ‘ನೀಟ್’ ಪರೀಕ್ಷೆ ಬರೆದ 13,26,725 ವಿದ್ಯಾರ್ಥಿಗಳು
ನವದೆಹಲಿ, ಮೇ 6- ವೈದ್ಯಕೀಯ ಕೋರ್ಸ್ಗಳಿಗೆ ದೇಶಾದ್ಯಂತ ಇಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು 136 ನಗರಗಳ 2255 ಕೇಂದ್ರಗಳಲ್ಲಿ ನಡೆಸಲಾಯಿತು. ಕರ್ನಾಟಕದಿಂದ 96,377 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 187 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ರಾಷ್ಟ್ರದಲ್ಲಿ ಒಟ್ಟು 13,26,725 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಆಯ್ಕೆ ಮಾಡಲು ದೇಶಾದ್ಯಂತ ಏಕರೂಪದ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ನೀಟ್ ಪರೀಕ್ಷೆಗೆ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿತ್ತು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಶೂ, ವ್ಯಾಲೆಟ್, ಗಾಗಲ್ಸ್, ಕೈ ಚೀಲ, ಬೆಲ್ಟ್, ಟೋಪಿ, ಕೈ ಗಡಿಯಾರ, ಬ್ರೇಸ್ಲೆಟ್, ಕ್ಯಾಮೆರಾ, ಕಿವಿಯೋಲೆ, ಉಂಗುರ, ಮೂಗುತಿ, ನೆಕ್ಲೇಸ್, ಪೆಂಡೆಂಟ್, ದೊಡ್ಡ ಬಟನ್ ಅಥವಾ ಬ್ಯಾಡ್ಜ್ ಹೊಂದಿರುವ ಬಟ್ಟೆ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.