ದೇಶ ಸೇವೆ ಎಂದರೆ ಇದೆ ಅಲ್ಲವೇ.. : ಇವರ ಕೈಯಲ್ಲಿ ಪುಸ್ತಕವಾಗಿ ರೂಪುಗೊಳ್ಳುತ್ತದೆ ರದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

Mohan-01

ಬೆಂಗಳೂರು, ಡಿ.10– ಕಸದಿಂದ ರಸ ಮಾಡಿ ಹಲವು ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಈ ವಯೋವೃದ್ಧರ ಎಲೆಮರೆಯ ಸೇವೆ ಅನನ್ಯ. ಬೀದಿಯಲ್ಲಿ ಬಿಸಾಡಿದ ಲದ್ದಿ ಪೇಪರ್‍ಗಳನ್ನೆಲ್ಲ ಆಯ್ದುಕೊಂಡು ಅವುಗಳನ್ನೆಲ್ಲ ನೋಟ್‍ಪುಸ್ತಕ ಮಾಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಹಂಚಿ ಈ ಮೂಲಕ ಶೈಕ್ಷಣಿಕವಾಗಿ ನೆರವು ನೀಡುತ್ತ ತಮ್ಮ ಸೇವೆಯನ್ನು ನಿರಂತರವಾಗಿ ಈ ನಿವೃತ್ತ ನೌಕರರೊಬ್ಬರು ಮಾಡಿಕೊಂಡು ಬಂದಿದ್ದಾರೆ.  ಅಂದಹಾಗೆ ಸದ್ದಿಲ್ಲದೆ ಯಾರಿಗೂ ತಿಳಿಯದಂತೆ ಸಮಾಜ ಸೇವೆ ಮಾಡುತ್ತಿರುವ ಈ ಹಿರಿಯ ವ್ಯಕ್ತಿಯ ಹೆಸರು ಮೋಹನ್. ಇವರು ಐಟಿಐ ಕಂಪೆನಿಯ ನಿವೃತ್ತ ಉದ್ಯೋಗಿ. ಜೀವನದ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೆ ಬಡ ಮಕ್ಕಳಿಗೆ ತನ್ನದೇ ಆದ ವಿಶಿಷ್ಟ ಸೇವೆ ಮಾಡುತ್ತಿರುವುದು ನಿಜಕ್ಕೂ ಮಾದರಿ.

ಸಾಸಿವೆಯಷ್ಟು ಕೆಲಸ ಮಾಡಿದರೆ ಆನೆಯಷ್ಟು ಪ್ರಚಾರ ಪಡೆಯುವವರೇ ಜಾಸ್ತಿ ಇರುವ ಈ ಸಂದರ್ಭದಲ್ಲಿ ಸದ್ದಿಲ್ಲದೆ ತಮ್ಮ ಕಾಯಕವನ್ನು ನಿರಂತರವಾಗಿ ಮಾಡುತ್ತ ನೂರಾರು ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವು ನೀಡುತ್ತ ಬಂದಿರುವ ಇವರ ಕಾರ್ಯವೈಖರಿಯನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬೆಳಗಿನ ಜಾವ 4.30 ರಿಂದ 5ರ ಸಮಯ. ಬೆಂಗಳೂರಿನ ಬ್ಯಾಂಕ್ ಕಾಲೋನಿ ವೃತ್ತದಲ್ಲಿ ಹಲವಾರು ದಿನಪತ್ರಿಕೆಗಳನ್ನು ತುಂಬಿಕೊಂಡು ವ್ಯಾನ್‍ಗಳು ಬಂದು ನಿಲ್ಲುತ್ತವೆ. ಪತ್ರಿಕೆಯ ಬಂಡಲ್‍ಗಳನ್ನು ಕೆಳಗೆ ಹಾಕಿ ಹೋದ ನಂತರ ಪತ್ರಿಕೆ ಏಜೆಂಟರುಗಳು ಬಂದು ತಮ್ಮ ತಮ್ಮ ಪತ್ರಿಕೆಯ ಬಂಡಲ್‍ಗಳನ್ನು ಬಿಚ್ಚುತ್ತಾರೆ.

ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್‍ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಕೊಳ್ಳುತ್ತಾರೆ. ಈ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುವ 67 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದ ಎಲ್ಲ ಬಿಳಿ ಬಣ್ಣದ ಆ ಪೇಪರ್‍ಗಳನ್ನು ಒಂದೊಂದಾಗಿ ತೆಗೆದುಕೊಂಡು ಜೋಡಿಸಿಕೊಳ್ಳುತ್ತಾರೆ.  ಪ್ರತಿನಿತ್ಯ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಬಿಳಿ ಕಾಗದಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಒಂದು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಸೊಗಸಾದ ಬರೆಯುವ ಹಾಳೆಗಳನ್ನಾಗಿ ಮಾಡಿ ಪುಸ್ತಕದ ರೂಪಕ್ಕೆ ಪರಿವರ್ತಿಸಿ ತಿಂಗಳಿಗೆ ಹತ್ತಾರು ಬರೆಯುವ ಪುಸ್ತಕಗಳನ್ನು ಶ್ರದ್ಧೆಯಿಂದ ತಯಾರಿಸುವ ಇವರು ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ.

ಇವರು ಶಾಲೆಗೆ ಬಂದರೆಂದರೆ ಸಾಕು, ಬಡ ಮಕ್ಕಳು ಓಡೋಡಿ ಬಂದು ತಾತ ತಾತ ಎನ್ನುತ್ತ ಮುದ್ದಾಡುತ್ತಾರೆ. ತಮಗೆ ಪುಸ್ತಕ ಕೊಟ್ಟ ತಾತನಿಗೆ ಕೃತಜ್ಞತೆ ಹೇಳುತ್ತಾರೆ. ಈ ಕೆಲಸ ನಮಗೆ ಸಣ್ಣದೆನಿಸಿದರೂ ಇಳಿ ವಯಸ್ಸಿನಲ್ಲಿ ಪ್ರತಿನಿತ್ಯ ತಪ್ಪದೆ ಈ ಪೇಪರ್‍ಗಳನ್ನು ಆರಿಸಿಕೊಂಡು ಹೋಗಿ ಅದನ್ನು ಅಚ್ಚುಕಟ್ಟಾಗಿ ಕತ್ತರಿಸಿ ಹತ್ತಾರು ನೋಟ್ ಪುಸ್ತಕಗಳನ್ನು ತಯಾರು ಮಾಡಿ ಅವುಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ತಲುಪಿಸುವ ಈ ತಾತನ ಜವಾಬ್ದಾರಿ ಮೆಚ್ಚಬೇಕು.  ಇವರು ತಮ್ಮ ಹೆಸರನ್ನು ಹೇಳಿಕೊಳ್ಳಲು ಕೂಡ ಸಂಕೋಚ ಪಟ್ಟುಕೊಳ್ಳುತ್ತಾರೆ. ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಏನಾದರೂ ಸೇವೆ ಮಾಡಬೇಕೆಂಬುದು ಇವರ ಹಂಬಲ. ಎಲೆಮರೆಯಂತೆ ಇವರು ತಮ್ಮ ಕಾಯಕವನ್ನು ಬಹುದಿನಗಳಿಂದ ಮಾಡಿಕೊಂಡು ಬಂದಿದ್ದಾರೆ. ಯಾರೋ ಇದನ್ನು ಗಮನಿಸಿರುವವರು ಬಹಿರಂಗಪಡಿಸಿದ್ದಾರೆ. ಇದಲ್ಲವೇ ದೇಶ ಸೇವೆ… ಈಶ ಸೇವೆ…

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin