ದೌರ್ಜನ್ಯದಿಂದ ಭಾರತದ ಐಕ್ಯತೆಗೆ ಧಕ್ಕೆ : ದಿನೇಶ್‍ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

Dinesh

ಬೆಂಗಳೂರು,ಆ.15- ಒಂದೇ ರೀತಿಯ ಸಿದ್ಧಾಂತವನ್ನು ಪಾಲಿಸಬೇಕೆಂದು ದೇಶಾದ್ಯಂತ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲಾಗುತ್ತಿದ್ದು, ಇದರಿಂದ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆಪಿಸಿಸಿ ಕಚೇರಿಯಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶೋಷಿತರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ದೌರ್ಜನ್ಯವೆಸಗ ಲಾಗುತ್ತಿದೆ. ಇದರಿಂದ ಭಾರತದ ಐಕ್ಯತೆ ಧಕ್ಕೆಯಾಗುತ್ತಿದೆ ಎಂದರು.
ವಿವಿಧತೆಯಲ್ಲಿ ಏಕತೆಯನ್ನು ರೂಢಿಸಿ ಕೊಂಡಿರುವ ಭಾರತ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿದೆ. ಆದರೆ, ಇತ್ತೀಚಿನ ಘಟನೆಗಳು ಆತಂಕ ಸೃಷ್ಟಿಮಾಡಿವೆ. ಕಾನೂನು ಕೈಗೆತ್ತಿಕೊಳ್ಳುವ ಕೆಲವು ಶಕ್ತಿಗಳು ಕೋಮು ವಾದಿ ವಿಷ ಬೀಜ ಬಿತ್ತುತ್ತಿವೆ. ಇಂತಹ ಕೃತ್ಯಕ್ಕೆ ಕೇಂದ್ರ ಪ್ರಚೋದನೆ ನೀಡುತ್ತಿದೆ ಎಂದು ವಿಷಾದಿಸಿದರು.

ಸ್ವಾತಂತ್ರ್ಯದ ಉದ್ದೇಶವೇನು. ಅದಕ್ಕಾಗಿ ಯಾರ್ಯಾರು ಹೋರಾಟ ಮಾಡಿದರು ಎಂಬ ಮಾಹಿತಿಗಳನ್ನು ಮೊದಲು ಪ್ರಧಾನಿ ಅವರು ಅರ್ಥ ಮಾಡಿಕೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದರು.  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೋರಾಟ ತೀವ್ರಗೊಂಡಿದೆ. ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದೆ. ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪ್ರಧಾನಿ ಅವರು ಕೋಮು ಪ್ರಚೋದಿತ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ವಿಷಾದಿಸಿದರು.  ಮಹಾನೀಯರ ಹೋರಾಟದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಲು ಅವಕಾಶ ನೀಡಬಾರದು. ಅತಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.  ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರೋಷನ್‍ಬೇಗ್, ಶಾಸಕರಾದ ಎನ್.ಎ.ಹ್ಯಾರಿಸ್, ಕೆ.ಜೆ.ಜಾರ್ಜ್, ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ.ರಾಜಶೇಖರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin