ಧನದಾಹಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ರಮೇಶ್ ಕುಮಾರ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01

ಬೆಂಗಳೂರು, ಮಾ.20 – ವಿವಿಧ ಯೋಜನೆಗಳಡಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮೀನಾಮೇಷ ಎಣಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಹೆಡೆಮುರಿ ಕಟ್ಟಲು ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ವಿಧಾನಪರಿಷತ್‍ನಲ್ಲಿಂದು ಎಚ್ಚರಿಸಿದ್ದಾರೆ.  ಉತ್ತಮ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಪ್ರೋತ್ಸಾಹಿಸಲಾಗುವುದು. ಅದೇ ರೀತಿ ವೈದ್ಯ ವೃತ್ತಿಯನ್ನೇ ಮರೆತು ಹಣವೇ ಸರ್ವಸ್ವ ಎನ್ನುವಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು. ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶ್ರೀನಿವಾಸ್ ಮಾನೆ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಆಸ್ಪತ್ರೆಯೊಂದಿಗೆ ಸರ್ಕಾರ ಸಂಘರ್ಷ ಮಾಡುತ್ತಿಲ್ಲ. ಅನೇಕ ಖಾಸಗಿ ಸಂಸ್ಥೆಗಳು ಉತ್ತಮ ಸೇವೆ ನೀಡುತ್ತಿವೆ. ಆ ಬಗ್ಗೆ ನಮಗೆ ಗೌರವವಿದೆ ಎಂದ ಅವರು, ಹಣ ಕಟ್ಟದವರಿಗೆ ಹೆಣ ಕೊಡುವುದಿಲ್ಲ ಎಂದು ಮನುಷ್ಯತ್ವ ಮರೆತವರಿಗೆ ಏನು ಮಾಡಬೇಕೆಂದು ಪ್ರಶ್ನಿಸಿದರು.

ಸರ್ಕಾರದಿಂದ ನೀಡಬೇಕಾದ 661 ಕೋಟಿ ಹಣವನ್ನು ಈಗಾಗಲೇ ನೀಡಲಾಗಿದೆ. ಬಾಕಿ 41 ಕೋಟಿ ಹಣವನ್ನು ಕೊಡಲು ಸರ್ಕಾರ ಸಿದ್ಧವಿದೆ. ಹಣ ಕೊಡುವವರೆಗೂ ಸೇವೆ ಕೊಡುವುದಿಲ್ಲ ಎಂದು ಪಟ್ಟು ಹಿಡಿಯುವ ವೈದ್ಯರಿಗೆ ಕಾನೂನು ರುಚಿ ತೋರಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು, ಶಾಸಕರು ಮತ್ತವರ ಮಕ್ಕಳು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು ಎನ್ನುವುದಾದರೆ ಅವರೇನು ಎರಡನೆ ದರ್ಜೆ ನಾಗರಿಕರೇ ಎಂದು ಪ್ರಶ್ನಿಸಿದ ರಮೇಶ್‍ಕುಮಾರ್, ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಪ್ರವೃತ್ತಿ ಮೊದಲು ಕೊನೆಗಾಣಬೇಕು ಎಂದರು.

ಅಮೆರಿಕದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ನಿಯಮವಿದೆ. ಆದರೆ ನಮ್ಮಲ್ಲಿ ಅಂತಹ ಕಾಯ್ದೆ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. 2007ರಲ್ಲಿ ಈ ಸಂಬಂಧ ಕಾಯ್ದೆ ತರಲಾಗಿದ್ದರೂ ಎಷ್ಟು ಜನರ ಮೇಲೆ ಮೊಕದ್ದಮೆ ದಾಖಲಿಸಿದ್ದೇವೆ ಎಂದು ಪ್ರಶ್ನಿಸಿದ ಅವರು ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ನಾನು ಖಾಸಗಿ ಆಸ್ಪತ್ರೆ ಅಥವಾ ವೈದ್ಯರನ್ನು ದೂಷಿಸುತ್ತಿಲ್ಲ. ಅವರ ಬಗ್ಗೆ ನನಗೆ ಯಾವ ವಿರೋಧವೂ ಇಲ್ಲ. ಆದರೆ, ಅಮಾನವೀಯವಾಗಿ ವರ್ತಿಸುವವರನ್ನು ಸುಮ್ಮನೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ವಿಪರೀತ ಸುಲಿಗೆ ಮಾಡಲಾಗುತ್ತಿದೆ. ನಿಮ್ಮ ಬಾಕಿ ಹಣ ಕೊಡಲು ಸಿದ್ಧರಿದ್ದೇವೆ ಎಂದು ನಾನು ಪದೇ ಪದೇ ಹೇಳುತ್ತಿದ್ದರೂ ವೈದ್ಯ ವೃತ್ತಿಗೆ ದ್ರೋಹ ಬಗೆಯಲು ಮುಂದಾಗಿದ್ದಾರೆ. ಸರ್ಕಾರ ಅಷ್ಟು ದುರ್ಬಲವಾಗಿಲ್ಲ. ನಾವು ಕೈಕಟ್ಟಿ ಕೂರುವುದಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಉತ್ತಮ ಸೇವೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಗದಾಪ್ರಹಾರ ಮಾಡುವುದು ಸರಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಉತ್ತಮ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೂ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin