ಧರ್ಮರಾಜಕಾರಣ : ಉಲ್ಟಾ ಹೊಡೆದ ಸಚಿವ ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

M.B.Patil

ಬೆಂಗಳೂರು, ಜು.31-ಧರ್ಮ ರಾಜಕಾರಣದಲ್ಲಿ ಸಚಿವ ಎಂ.ಬಿ.ಪಾಟೀಲ್ ಉಲ್ಟಾ ಹೊಡೆದಿದ್ದು, ವೀರಶೈವ ಲಿಂಗಾಯತ ಧರ್ಮಕ್ಕೆ ಬದಲಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಒತ್ತಾಯಿಸುವಂತೆ ಮನವಿ ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜ್ಯುಕೇಷನಲ್ ಅಸೋಸಿಯೇಷನ್ ಲೆಟರ್‍ಹೆಡ್‍ನಲ್ಲಿ ಪತ್ರ ಬರೆದಿರುವ ಸಚಿವ ಎಂ.ಬಿ.ಪಾಟೀಲ್ ಅವರು, ವೀರಶೈವ ಲಿಂಗಾಯತ ಧರ್ಮ ಸ್ವತಂತ್ರ ಮಾನ್ಯತೆಯನ್ನು ಕೇಳಿದರೆ ಅದು ಸಿಗುವುದಿಲ್ಲ ಎಂಬ ಕಟು ಸತ್ಯ ನಮಗೆ ಅರ್ಥವಾಗಿದೆ.

ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಒತ್ತಾಯಿಸಬೇಕಿದೆ ಎಂದು ಹೇಳಿದ್ದಾರೆ. 2013ರ ಜುಲೈ 31 ರಂದು ಆಗಿನ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿದೆ.  ಆ ಮನವಿಗೆ ನಾನು ಸಹಿ ಹಾಕಿದ್ದು ತಪ್ಪು ಎಂದು ನನಗೆ ಮನವರಿಕೆಯಾಗಿದೆ. ಇತ್ತೀಚೆಗೆ ಶರಣರ ಷಟಸ್ಥಲ ವಚನಗಳನ್ನು ಅಧ್ಯಯನ ನಡೆಸಿ ನಾನು ಕಂಡುಕೊಂಡ ಸತ್ಯವೇನೆಂದರೆ, ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕತೆಯನ್ನು ಹೊಂದಿದೆ. ಡಾ.ಹಿರೇಮಲ್ಲೂರು ಈಶ್ವರನ್ ಅವರು ಪ್ರಕಟಿಸಿರುವ ಎರಡು ಗ್ರಂಥಗಳಲ್ಲಿ ಹಾಗೂ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಮಾರ್ಗಸಂಪುಟಗಳಲ್ಲಿ ಪ್ರಕಟವಾದ ಹಲವಾರು ಲೇಖನಗಳಿಂದ ಲಿಂಗಾಯತ ಸ್ವತಂತ್ರ ಧರ್ಮ ಎಂಬುದು ಮನವರಿಕೆಯಾಗಿದೆ. ಸಂವಿಧಾನ ಅಸ್ತಿತ್ವಕ್ಕೆ ಬರುವ 800 ವರ್ಷಗಳ ಹಿಂದೆ ಲಿಂಗಾಯತ ಧರ್ಮ ಸ್ಥಾಪನೆಯಾಗಿದ್ದ ಬಗ್ಗೆ ಬ್ರಿಟಿಷ್ ಗೆಜೆಟಿಯೆರ್, ಕಿಟಲ್ ನಿಘಂಟುಗಳಲ್ಲಿ ಉಲ್ಲೇಖವಾಗಿದೆ. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂದು ಸ್ಪಷ್ಟಪಡಿಸಲಾಗಿದೆ.

ಹೀಗಾಗಿ ವೀರಶೈವ ಮಹಾಸಭಾದವರು ಹಿಂದೆ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು. ಲಿಂಗಾಯತ ವೀರಶೈವ ಧರ್ಮಕ್ಕೆ ಮಾನ್ಯತೆ ಕೇಳಿದರೆ ಅದು ಸಿಗುವುದಿಲ್ಲ. ಲಿಂಗಾಯತ ಸ್ವತಂತ್ರಧರ್ಮದ ಬೇಡಿಕೆ ಇಟ್ಟರೆ ಈಡೇರಲಿದೆ. ಹಿರಿಯ ಮಠಾಧೀಶರಾದ ಶ್ರೀ ಇಳಕಲ್ಲಿನ ಮಹಾಂತಪ್ಪಗಳವರು, ತೋಂಟದ ಡಾ.ಸಿದ್ದಲಿಂಗಸ್ವಾಮೀಜಿ, ಬಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯರು, ಚಿತ್ರದುರ್ಗದ ಶ್ರೀ ಮುರುಘಾ ಶರಣರು, ನಾಗನೂರು ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಕೂಡಲಸಂಗಮದ ಬಸವಜಯಮೃತ್ಯುಂಜಯ, ಡಾ.ವೀರಣ್ಣ ರಾಜೂರ, ರಂಜಾನ ದರ್ಗಾ ಮತ್ತಿತರ ತಜ್ಞರೊಂದಿಗೆ ಚರ್ಚಿಸಿ ಅದರ ಆಧಾರದ ಮೇಲೆ ಒಮ್ಮತದ ಅಭಿಪ್ರಾಯ ಕ್ರೋಢೀಕರಿಸಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೇಡಿಕೆ ಇಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin