ಧಾರವಾಡ ಜಿಲ್ಲೆಯಲ್ಲಿ ಇನ್ನೂ ಚಾಲ್ತಿಯಲ್ಲಿದೆ ದಲಿತರ ಬಹಿಷ್ಕಾರ ಪದ್ಧತಿ..!

ಈ ಸುದ್ದಿಯನ್ನು ಶೇರ್ ಮಾಡಿ

Caste--01

ಕಲಘಟಗಿ, ಜೂ.28- ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ನಾವೇನು ತುಂಡು ಪಾಳೇಗಾರಿಕೆ ಯುಗದಲ್ಲಿದ್ದೇವೋ ಅಥವಾ ಆಧುನಿಕ ಪ್ರಜಾಪ್ರಭುತ್ವದಲ್ಲಿದ್ದೇವೋ ಎಂಬ ಸಂಶಯ ಬರುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಸವರ್ಣೀಯರು ದಲಿತರಿಗೆ ಬಹಿಷ್ಕಾರ ಹಾಕುವುದು.
ಈ ಘಟನೆ ನಡೆದಿರುವುದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ. ದಲಿತ ವ್ಯಕ್ತಿಯೊಬ್ಬರು ದೇವರಿಗೆ ಬಿಟ್ಟ ಗೂಳಿಯನ್ನು ಹೊಡೆಯಬಾರದೆಂದು ಮನವಿ ಮಾಡಿದ್ದಕ್ಕೆ ಅಲ್ಲಿನ ಇಡೀ 10 ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಲಘಟಗಿ ತಾಲೂಕಿನ ದೇವರಕೊಂಡ ಗ್ರಾಮದ ದುರ್ಗಪ್ಪ ಹರಿಜನ ಕುಟುಂಬ ಸೇರಿದಂತೆ ಇತರೆ 10 ಕುಟುಂಬಗಳಿಗೂ ಬಹಿಷ್ಕಾರ ಹಾಕಿರುವ ಗ್ರಾಮಸ್ಥರು ಅವರೊಂದಿಗೆ ಯಾರಾದರೂ ಮಾತನಾಡಿದರೆ, ಅವರಿಗೆ ಅಂಗಡಿಗಳಲ್ಲಿ ವಸ್ತುಗಳನ್ನು ಕೊಟ್ಟರೆ, ಹೊಟೇಲ್‍ಗಳಿಗೆ ಪ್ರವೇಶ ನೀಡಿದರೆ ಅಂತಹವರಿಗೆ 500ರೂ. ದಂಡ ಹಾಕುವುದಾಗಿ ಪಂಚಾಯಿತಿ ಕಟ್ಟೆ ಆದೇಶ ನೀಡಿದೆ.

ಘಟನೆ ಹಿನ್ನೆಲೆ:

ದೇವರಕೊಂಡ ಗ್ರಾಮದ ಹರಿಜನ ಕೇರಿಯಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನಕ್ಕೆ ಒಂದು ಗೂಳಿ ಬಿಟ್ಟಿದ್ದರು. ಆ ಗೂಳಿ ಇತ್ತೀಚೆಗೆ ಈರಪ್ಪ ಶಂಕ್ರಪ್ಪ ಅಣ್ಣಿಗೇರಿ ಎಂಬುವರ ಹೊಲದಲ್ಲಿ ಮೇಯುತ್ತಿತ್ತು.ಇದರಿಂದ ಕೋಪಗೊಂಡ ಈರಪ್ಪ ಗೂಳಿಗೆ ಹೊಡೆದಿದ್ದಾನೆ. ದೇವರ ಗೂಳಿಯನ್ನು ಹೊಡೆಯಬೇಡಿ ಎಂದು ದುರ್ಗಪ್ಪ ಹರಿಜನ ಮನವಿ ಮಾಡಿದ್ದಾರೆ.  ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದುರ್ಗಪ್ಪ ಹರಿಜನ ಕುಟುಂಬ ಮತ್ತಿತರ 10 ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಹರಿಜನ ಕುಟುಂಬಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಊರು ಬಿಡುವ ಹಂತ ತಲುಪಿವೆ. ಇಷ್ಟಾದರೂ ಇವರನ್ನು ಕೇಳುವವರೇ ಇಲ್ಲದಂತಾಗಿದೆ. ಕೊನೆಗೆ ವಿಷಯ ತಿಳಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ.ಹುರುಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಬಹಿಷ್ಕಾರ ಹಾಕಿರುವುದು ಸಾಬೀತಾಗಿದೆ.

ಅಧಿಕಾರಿಗಳು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಮಧ್ಯೆ ದಲಿತ ಸಂಘರ್ಷ ಸಮಿತಿ ಮುಖಂಡ ಮಂಜುನಾಥ ಸಿದ್ದಪ್ಪ ಮಾದರ ಅವರು ಮಾತನಾಡಿ, ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ದೌರ್ಜನ್ಯ ಖಂಡಿಸಿ ತಾವು ಧರಣಿ ನಡೆಸುತ್ತಿದ್ದು, ಕೂಡಲೇ ಸರ್ಕಾರ ಸೂಕ್ತ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin