ಧೈರ್ಯವಿದ್ದರೆ ಪೊಲೀಸರು ನನ್ನ ಬಂಧಿಸಲಿ : ಗಾಯಕ್ವಾಡ್ ದರ್ಪ, ವಿಮಾನಯಾನಕ್ಕೆ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Raveendra-Gayakwad

ನವದೆಹಲಿ/ಮುಂಬೈ, ಮಾ.24– ಕ್ಷುಲ್ಲಕ ಕಾರಣಕ್ಕಾಗಿ ಏರ್‍ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದೇ ವೇಳೆ ಅವರನ್ನು ಕಪ್ಪು ಪಟ್ಟಿಗೆ ಸೇರಿರುವ ಫೆಡರೇಷನ್ ಆಫ್ ಇಂಡಿಯನ್ ಏರ್‍ಲೈನ್ಸ್ (ಎಫ್‍ಐಎ).ವಿಮಾನಯಾನ ಮಾಡುವುದನ್ನು ನಿಷೇಧಿಸಿದೆ. ಅಲ್ಲದೆ, ಸಂಸದರ ಗೂಂಡಾಗಿರಿ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಈ ಮಧ್ಯೆ ತಾವು ಹಲ್ಲೆ ನಡೆಸಿದ ಏರ್ ಇಂಡಿಯಾ ಅಧಿಕಾರಿ ಅಥವಾ ಏರ್ ಇಂಡಿಯಾದ ಕ್ಷಮೆ ಕೋರುವುದಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿರುವ ಗಾಯಕ್ವಾಡ್, ಧೈರ್ಯವಿದ್ದರೆ ದೆಹಲಿ ಪೊಲೀಸರು ತಮ್ಮನ್ನು ಬಂಧಿಸಲಿ ಎಂದು ದರ್ಪದಿಂದ ಸವಾಲು ಹಾಕಿದ್ದಾರೆ.  ಏರ್ ಇಂಡಿಯಾದ ಹಿರಿಯ ಡ್ಯೂಟಿ ವ್ಯವಸ್ಥಾಪಕ ಶಿವಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿ ಉದ್ಧಟನತನ ತೋರಿದ್ದೇ ಅಲ್ಲದೇ ತಮ್ಮ ಕೃತ್ಯವನ್ನೂ ಸಮರ್ಥಿಸಿಕೊಂಡಿರುವ ಗಾಯಕ್ವಾಡ್ ವರ್ತನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಶಿವಸೇನೆ ಗಾಯಕ್ವಾಡ್‍ಗೆ ಸಮನ್ಸ್ರಿಜಾಗೊಳಿಸಿ ವಿವರಣೆ ಕೋರಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‍ಐಎ ನಾಲ್ಕು ವಿಮಾನಗಳಲ್ಲಿ ಸಂಸದರು ಪ್ರಯಾಣ ಮಾಡುವುದನ್ನು ನಿರ್ಬಂಧಿಸಿದೆ. ಜೆಟ್ ಏರ್‍ವೇಸ್, ಇಂಡಿಗೋ, ಸ್ಪೈಸ್‍ಜೆಟ್ ಮತ್ತು ಗೋಏರ್ ಈ ವಿಮಾನಗಳಲ್ಲಿ ಗಾಯಕ್ವಾಡ್ ಇನ್ನು ಮುಂದೆ ಪ್ರಯಾಣಿಸುವಂತಿಲ್ಲ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ವಿಮಾನಯಾನದಿಂದ ಗಾಯಕ್ವಾಡ್‍ರನ್ನು ನಿರ್ಬಂಧಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಫ್‍ಐಎ ಮೂಲಗಳು ತಿಳಿಸಿವೆ. ಈ ನಾಲ್ಕು ವಿಮಾನ ಸಂಸ್ಥೆಗಳು ಎಫ್‍ಐಎಗೆ ಒಳಪಟ್ಟಿವೆ.   ಇನ್ನೂ ಕೆಲವು ವಿಮಾನಯಾನ ಸಂಸ್ಥೆಗಳೂ ಕೂಡ ಇದೆ ಕೈಗೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ಹೇಳಿವೆ. ಪ್ರಯಾಣಿಕರ ಪಟ್ಟಿಯಿಂದ ಗಾಯಕ್ವಾಡ್ ಹೆಸರನ್ನು ತೆಗೆದುಹಾಕಲು ನಾವು ಸಿದ್ದರಿದ್ದೇವೆ. ಅವರು ವಿಮಾನಯಾನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಈಗಾಗಲೇ ಭರವಸೆ ನೀಡಿದ್ದಾರೆ.  ಈ ಮಧ್ಯೆ, ಶಿವಸೇನೆ ವರಿಷ್ಠರು ಗಾಯಕ್ವಾಡ್‍ಗೆ ಸಮನ್ಸ್ ಜಾರಿಗೊಳಿಸಿ ಕಚೇರಿಗೆ ಖುದ್ದು ಹಾಜರಾಗಿ ವಿವರಣೆ ನೀಡವಂತೆ ಸೂಚಿಸಿದ್ದಾರೆ.

ರವೀಂದ್ರ ಗಾಯಕ್ವಾಡ್ ವಿರುದ್ಧ ಕ್ರಮ:

ಏರ್‍ಇಂಡಿಯಾ ಅಧಿಕಾರಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರೂ ಸಹ ಗಾಯಕ್ವಾಡ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಶಾಸಕರ ವರ್ತನೆಯಲ್ಲಿ ಹೇಳಿಕೆಯಲ್ಲಿ ಖಂಡಿಸಿರುವ ಅವರು, ಜನ ಪ್ರತಿನಿಧಿಯಾಗಿರುವ ಸಂಸದರೊಬ್ಬರು ಈ ರೀತಿ ವರ್ತಿಸಿರುವುದು ಸರಿಯಲ್ಲ. ಇಂಥ ಕೆಲಸವನ್ನು ಯಾರೂ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಗಾಯಕ್ವಾಡ್ ವಿರುದ್ಧ ದೂರ ಬಂದರೆ ಖಂಡಿತಾ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಕ್ಷಮೆ ಕೋರುವುದಿಲ್ಲ :

ತಾವು ಹಲ್ಲೆ ನಡೆಸಿದ ಏರ್ ಇಂಡಿಯಾ ಸಿಬ್ಬಂದಿಗೆ ತಾವು ಕ್ಷಮೆ ಕೋರುವುದಿಲ್ಲ ಎಂದು ಹೇಳಿರುವ ಗಾಯಕ್ವಾಡ್, ಈ ಘಟನೆಗೆ ಆ ಅಧಿಕಾರಿಯೇ ಕಾರಣ ಎಂದು ವಿತಂಡವಾದ ಮಾಡಿದ್ದಾರೆ. ಅಲ್ಲದೇ ಧೈರ್ಯವಿದ್ದರೆ ದೆಹಲಿ ಪೊಲೀಸರು ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.   ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ. ಏರ್ ಇಂಡಿಯಾ ಸಂಸ್ಥೆಯೇ ತಪ್ಪಿತಸ್ಥ ಸಿಬ್ಬಂದಿ ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.   ಪುಣೆಯಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಸೀಟು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಗುರುವಾರ ತನ್ನ ತಂದೆ ವಯಸ್ಸಿನ ಶಿವಕುಮಾರ್ ಅವರ ಮೇಲೆ ಗಾಯಕ್ವಾಡ್ 25 ಬಾರಿ ಚಪ್ಪಲಿಯಿಂದ ಥಳಿಸಿ ದೌರ್ಜನ್ಯ ಎಸಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin