ಧ್ವನಿ ಇಲ್ಲದವರ ಬೆನ್ನಿಗೆ ನಿಂತವರು ಶರಣರು

ಈ ಸುದ್ದಿಯನ್ನು ಶೇರ್ ಮಾಡಿ

CHIKKAMANGALURU-7

ಚಿಕ್ಕಮಗಳೂರು, ಆ.18- ಧ್ವನಿ ಬತ್ತಿ ಹೋದ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬುವಲ್ಲಿ ಬಸವಾದಿ ಶರಣರ ಪ್ರೇರಣೆ ಬಹಳಷ್ಟಿದೆ ಎಂದು ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.ಅಖಿಲ ಭಾರತ ಶರಣ ಸಾಹಿತ್ಯಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನ ಚಲನಶೀಲತೆ ಮಾತು, ಒಳ್ಳೆಯ ಮಾತು, ಹಾರಿಕೆ ಮಾತು, ಮನದ ಮಾತು, ಕೊಂಕು ಮಾತು, ತೋರಿಕೆ ಮಾತು, ಬಾಲಿಷ ಮಾತು, ಹಗುರ ಮಾತು, ಸರಳ ಮಾತು, ಮೆದು ಮಾತು ಹೀಗೆ 850 ರೀತಿಯ ಮಾತಿನ ರೀತಿಯನ್ನು ಪಟ್ಟಿಮಾಡಬಹುದು ಎಂದು ವಿವರಿಸಿದರು. ಸತ್ಯವಾದ ಮಾತೆ ಗಾಂಧೀಜಿ ಅವರಿಗೆ ದೇವರಾಯಿತು. ಪ್ರಿಯವಾದ ಸತ್ಯ ಮಾತನಾಡು ಎಂಬುದು ಹಳೆಯ ಮಾತು. ಮಾತೆ ಮುತ್ತು ಮಾತೆ ಮೃತ್ಯು ಎಂಬ ನಾಣ್ನುಡಿ ಪ್ರಚಲಿತದಲ್ಲಿದೆ.

 

ಮಾತುಬಲ್ಲವನಿಗೆ ಜಗಳವಿಲ್ಲ ಎಂಬ ಹಿರಿಯರ ಅನುಭವವಿದೆ. 12ನೇ ಶತಮಾನದ ಶರಣಸಮೂಹ ತನು ಮನಕ್ಕಷ್ಟೇ ಅಲ್ಲ ನಾಲಿಗೆಗೂ ದೀಕ್ಷೆಕೊಟ್ಟು ಮಾತನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದರು ಎಂದು ಬಣ್ಣಿಸಿದರು. ಮನಸ್ಸುಗಳನ್ನು ಕಟ್ಟುವಲ್ಲಿ ಕರ್ಣಾನಂದವು ಪ್ರಮುಖ ಪಾತ್ರವಹಿಸುತ್ತದೆ. ನೋವು ನಲಿವು ಅಭಿವ್ಯಕ್ತಿಸುವ ಅಸ್ತ್ರ ಮಾತು. ವ್ಯಕ್ತಿಯ ವ್ಯಕ್ತಿತ್ವ ಅಳೆಯುವ ಪರಿಣಾಮಕಾರಿ ಮಾಧ್ಯಮವೂ ಹೌದು. ಜನಪದರು ಅದಕ್ಕಾಗಿಯೆ ಮಾತು ಕುಲ ಹೇಳ್ತು ಎಂದಿದ್ದು, ಇಲ್ಲಿ ಕುಲ ಎಂದರೆ ಜಾತಿ ಅಲ್ಲ ವ್ಯಕ್ತಿತ್ವ ಎಂದ ಮಹೇಶ್, ನಾಲಗೆ ಮನಸಾಕ್ಷಿಯ ಪ್ರತೀಕ.

 

ಪ್ರಬಲ ವಿವೇಚನೆಯಿಂದ ಆಡಿದ ಮಾತುಗಳು ಮಂತ್ರ-ವಚನವಾಗಲು ಸಾಧ್ಯ. ಹಿತ ತಪ್ಪಿದ ಮಾತಿನಿಂದ ಅನಾಹುತ ಖಚಿತ ಎಂದರು.
ಮನುಷ್ಯ ಹಾಗು ಪ್ರಾಣಿ ಸಂಕುಲಗಳೆರಡಕ್ಕೂ ಸಮಾನವಾದ ಹಸಿವು, ಬಾಯಾರಿಕೆ, ನಿದ್ದೆ ಕಾಮನೆಗಳಿವೆ. ಮನುಷ್ಯನಿಗೆ ಮಾತು ಮತ್ತು ಆಲೋಚನೆ ಸಿದ್ಧಿಸಿರುವುದರಿಂದಲೇ ಪ್ರಾಣಿಗಳಿಗಿಂತ ಭಿನ್ನವೆನಿಸಿಕೊಳ್ಳುತ್ತಾನೆ. ಒಳಗಿನ ವಿವೇಕ ಎಚ್ಚರಿಸುವ ಮಾತು ಅಭಿದಾನ ಕೀರ್ತಿ ಎನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧ್ಯಕ್ಷ ರವೀಶ್‍ಕ್ಯಾತನಬೀಡು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಮಾತು ಮಹತ್ವದ ಪಾತ್ರವಹಿಸುತ್ತದೆ ಎಂದರು. ಜಿಲ್ಲಾ ಉಪಾಧ್ಯಕ್ಷರಾದ ಮಾವಿನಕೆರೆ ದಯಾನಂದ ಮತ್ತು ಪ್ರಭುಲಿಂಗಶಾಸ್ತ್ರಿ, ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಹಾಗೂ ಡಿಎಸ್‍ಎಂಎಸ್ ಅಧ್ಯಕ್ಷ ಎಸ್.ಪ್ರಭು ಮಾತನಾಡಿದರು.ಜಿಲ್ಲಾ ಪ್ರಧಾನಕಾರ್ಯದರ್ಶಿ ಈಶ್ವರಪಹೊಸಳಿ, ಖಜಾಂಚಿ ಜೆ.ಇ.ಸೋಮಶೇಖರ್, ನಿವೃತ್ತ ಕೃಷಿ ಅಧಿಕಾರಿ ಲೋಕೇಶಪ್ಪ, ಗಾಯಕ ಮೋಹನ್‍ಕುಮಾರ್, ಅಕ್ಕಮಹಾದೇವಿ ಮಹಿಳಾ ಸಂಘದ ಭಾರತಶಿವರುದ್ರಪ್ಪ, ಭಾಗ್ಯಮಹೇಶ್, ವನಜಾಕ್ಷಿ ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin