‘ ನಂಜನಗೂಡಲ್ಲಿ ಶ್ರೀನಿವಾಸ್‍ಪ್ರಸಾದ್ ವಿರುದ್ಧ ನಾನು ಸ್ಪರ್ಧಿಸುವುದಿಲ್ಲ’ : ಧೃವನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad

ಮೈಸೂರು, ಡಿ.24-ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ್‍ಪ್ರಸಾದ್ ವಿರುದ್ಧ ನಾನು ಸ್ಪರ್ಧಿಸುವುದಿಲ್ಲ. ಸಂಸದನಾಗಿಯೇ ಮುಂದುವರೆಯುತ್ತೇನೆ ಎಂದು ಧೃವನಾರಾಯಣ್ ಇಂದಿಲ್ಲಿ ಹೇಳಿದರು. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಮುಂಬರುವ ಉಪಚುನಾವಣೆಯಲ್ಲಿ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುಭಾಷ್ ಅವರು ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಇತ್ತು. ಆದರೆ ಅವರ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಧೃವನಾರಾಯಣ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿತ್ತು.
ಈ ಬಗ್ಗೆ ಧೃವನಾರಾಯಣ್ ಅವರೊಂದಿಗೆ ಚರ್ಚೆ ನಡೆಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದರು. ಆದರೆ ಈಗ ಸ್ವತಃ ಧೃವನಾರಾಯಣ್ ಅವರೇ ನಾನು ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಈಗಾಗಲೇ ಶ್ರೀನಿವಾಸ್‍ಪ್ರಸಾದ್ ಅವರು ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂಬುದು ದಟ್ಟವಾಗತೊಡಗಿದೆ. ಜೆಡಿಎಸ್‍ನಿಂದ ಇನ್ನೂ ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ. ಶ್ರೀನಿವಾಸ್‍ಪ್ರಸಾದ್ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿಲ್ಲವಾದರೂ ಅವರು ನಡೆಸಿದ ಸ್ವಾಭಿಮಾನಿ ಸಮಾವೇಶವನ್ನು ಬಹುತೇಕ ಬಿಜೆಪಿ ಮುಖಂಡರೇ ನಡೆಸಿದ್ದಾರೆ.
ಅಲ್ಲದೆ ಸದ್ಯದಲ್ಲೇ ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಘೋಷಿಸಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin