ನಂಜನಗೂಡಿನಲ್ಲಿ ಶ್ರೀನಿವಾಸ್‍ಪ್ರಸಾದ್ ಗೆಲುವು, ಗುಂಡ್ಲುಪೇಟೆಯಲ್ಲಿ ಸಮಬಲದ ಸ್ಪರ್ಧೆ : ವರದಿ

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad--01

ಬೆಂಗಳೂರು, ಏ.10-ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಕುರಿತಂತೆ ಗುಪ್ತಚರ ವಿಭಾಗ ವಿಭಿನ್ನ ವರದಿಯನ್ನು ಸರ್ಕಾರಕ್ಕೆ ನೀಡಿದೆ.  ಎರಡೂ ಕ್ಷೇತ್ರಗಳಲ್ಲಿ ಅತ್ಯಂತ ರಹಸ್ಯವಾಗಿ ಸಂಗ್ರಹಿಸಿರುವ ವರದಿಯನ್ನು ಗುಪ್ತಚರ ವಿಭಾಗ ನೀಡಿದ್ದು, ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‍ಪ್ರಸಾದ್ ಗೆಲುವು ಸಾಧಿಸಲಿದ್ದು, ಗುಂಡ್ಲುಪೇಟೆಯಲ್ಲಿ ಎರಡೂ ಕಾಂಗ್ರೆಸ್-ಬಿಜೆಪಿ ನಡುವೆ ಸಮಬಲದ ಸ್ಫರ್ಧೆ ಏರ್ಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಶೇಕಡವಾರು ಮತದಾನದ ಪ್ರಮಾಣವನ್ನು ಕ್ರೋಢೀಕರಿಸಿ ನೀಡಿರುವ ವರದಿಯಲ್ಲಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚಿನ ಮತದಾನ ನಡೆದಿದ್ದರೂ ಕಾಂಗ್ರೆಸ್-ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಇರುವುದರಿಂದ ಕೂದಲೆಳೆ ಅಂತರದಲ್ಲಿ ಯಾರು ಬೇಕಾದರೂ ಗೆಲ್ಲಬಹುದೆಂಬ ಅಂಶ ವರದಿಯಲ್ಲಿದೆ.  ಇನ್ನು ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಕೆಲವೇ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವು ಸಾಧ್ಯತೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಯ ಸತತ ಸೋಲು ಮತದಾರರ ಮೇಲೆ ಪ್ರಭಾವ ಬೀರಿಲ್ಲ ಎಂದು ವರದಿ ನೀಡಲಾಗಿದೆ.

ಜಾತಿಗಳ ಧೃವೀಕರಣ:

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಜಾತಿಗಳ ಧೃವೀಕರಣಕ್ಕೆ ನಾಂದಿ ಹಾಡಿದ್ದು, ಲಿಂಗಾಯತ -ದಲಿತ ಮತಗಳ ಕ್ರೋಢೀಕರಣ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ.  ಜಾತಿ ಸಂಘರ್ಷದಿಂದ ರಾಷ್ಟ್ರದ ಗಮನ ಸೆಳೆದಿದ್ದ ಬದನಾಳು ಗಲಭೆಯಿಂದ ನಂಜನಗೂಡಿನಲ್ಲಿ ದಲಿತ ಮತ್ತು ಲಿಂಗಾಯತ ಮತಗಳು ಬಿಜೆಪಿ ಅಭ್ಯರ್ಥಿಯನ್ನು ಕೈ ಹಿಡಿದಿದ್ದರೆ ಅಹಿಂದ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ ಎನ್ನಲಾಗಿದೆ.
ಇನ್ನು ಶ್ರೀನಿವಾಸ್‍ಪ್ರಸಾದ್ ರಾಜೀನಾಮೆ ನೀಡಿದ ತಕ್ಷಣವೇ ಕ್ಷೇತ್ರದಾದ್ಯಂತ ಸ್ವಾಭಿಮಾನಿ ಸಮಾವೇಶ ನಡೆಸಿದ್ದು, ಅವರ ಗೆಲುವಿಗೆ ಸಹಕಾರಿಯಾಗಲಿದೆ.
ದಲಿತ ಮತಗಳನ್ನೆ ಗುರಿಯಾಗಿಟ್ಟುಕೊಂಡು ಪ್ರಸಾದ್ ಸಮಾವೇಶ ನಡೆಸಿದ್ದು ಒಂದೆಡೆಯಾದರೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ವೀರಶೈವ ಮತಗಳು ಯಡಿಯೂರಪ್ಪ ಕಾರಣಕ್ಕಾಗಿ ಬಿಜೆಪಿಯನ್ನು ಗೆಲುವಿನ ಅಂಚಿಗೆ ತಂದಿದೆ ಎಂಬ ಅಂಶ ಗುಪ್ತಚರ ವರದಿಯಲ್ಲಿದೆ.  ಶ್ರೀನಿವಾಸ್‍ಪ್ರಸಾದ್ ಸುಮಾರು 3 ರಿಂದ 5 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ.

ಜಿದ್ದಾಜಿದ್ದಿನ ಸ್ಪರ್ಧೆ:

ಸಚಿವ ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.  ಮಹದೇವಪ್ರಸಾದ್ ಅವರ ಸಾವಿನ ಅನುಕಂಪ, ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ಸತತ ಸೋಲಿನಿಂದ ಮತದಾರರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.

ಪತಿಯ ಸಾವಿನ ಅನುಕಂಪ ಗೀತಾಮಹದೇವಪ್ರಸಾದ್ ಅವರನ್ನು ಕೈ ಹಿಡಿಯಬಹುದೆಂಬ ನಿರೀಕ್ಷೆ ಇತ್ತಾದರೂ ನಿರಂಜನ್‍ಕುಮಾರ್ ಎರಡು ಬಾರಿ ಮಹದೇವಪ್ರಸಾದ್ ವಿರುದ್ಧ ಕೆಲವೇ ಸಾವಿರ ಮತಗಳ ಅಂತರ ಸೋಲು ಕಂಡಿರುವುದು ಮತದಾರರ ಮೇಲೆ ಗಾಢ ಪರಿಣಾಮ ಬೀರಿದೆ.  ಈ ಬಾರಿ ದಾಖಲೆಯ ಮತದಾನ ನಡೆದಿದ್ದರೂ ಇಬ್ಬರೂ ಅಭ್ಯರ್ಥಿಗಳು ಪ್ರಬಲ ಸಮುದಾಯಕ್ಕೆ ಸೇರಿರುವುದರಿಂದ ಯಾರೇ ಗೆದ್ದರೂ ಅದು ಕೂದಲೆಳೆ ಅಂತರದಿಂದ ಸಾಧ್ಯ ಎಂಬುದನ್ನು ಗುಪ್ತಚರ ವಿಭಾಗ ಪತ್ತೆ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin