ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Nanjanagud-Gundlupete

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ (Live Updates)

ನಂಜನಗೂಡು  : 

ಕಾಂಗ್ರೆಸ್ – ಕಳಲೆ ಕೇಶವಮೂರ್ತಿ- 86,212 (ಗೆಲುವು)
ಬಿಜೆಪಿ -ವಿ.ಶ್ರೀನಿವಾಸ್ ಪ್ರಸಾದ್ – 64,878(ಸೋಲು)
ಗೆಲುವಿನ ಅಂತರ :  21,334ಗುಂಡ್ಲುಪೇಟೆ  : 
ಕಾಂಗ್ರೆಸ್-ಗೀತಾಮಹದೇವಪ್ರಸಾದ್-90,258 (ಗೆಲುವು)
ಬಿಜೆಪಿ – ನಿರಂಜನ್‍ಕುಮಾರ್-79,381 (ಸೋಲು)
ಗೆಲುವಿನ ಅಂತರ- 10,877


ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ, ಬಿಜಿಪಿಗೆ ಮರ್ಮಾಘಾತ : 

Geetha-Kalale

ಬೆಂಗಳೂರು,ಏ.13- 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು ,ಪ್ರತಿಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಮುಂದಿನ ಮಹಾಸಮರಕ್ಕೆ ರಣಕಹಳೆ ಮೊಳಗಿಸಿದೆ.

ಇನ್ನು ಎರಡು ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಫಲಿತಾಂಶ ಭಾರೀ ಮರ್ಮಾಘಾತ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ದಲಿತರ ಸ್ವಾಭಿಮಾನದ ಟ್ರಂಪ್ ಕಾರ್ಡ್ ಬಳಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‍ಗೂ ಹಿನ್ನಡೆಯಾಗಿದೆ.
ಇತ್ತ ಪತಿಯ ಸಾವಿನ ಅನುಕಂಪವನ್ನೇ ನೆಚ್ಚಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್‍ರ ಪತ್ನಿ ಗೀತಾ ಮಹದೇವಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 17,560 ಮತಗಳ ಅಂತರಿಂದ ಜಯಭೇರಿ ಭಾರಿಸಿದರೆ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‍ನ ಗೀತಾ ಮಹದೇವಪ್ರಸಾದ್ 11254 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.   ಉಪಸಮರದ ಫಲಿತಾಂಶ ಆಡಳಿತರೂಢ ಕಾಂಗ್ರೆಸ್‍ಗಾಗಲಿ ಇಲ್ಲವೇ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ 2018ರ ಮಹಾಸಮರಕ್ಕೆ ಮುನ್ನುಗ್ಗಲು ಒಂದಿಷ್ಟು ಆನೆಬಲ ಬಂದಿರುವುದು ಸುಳ್ಳಲ್ಲ.
ಫಲಿತಾಂಶದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದರೆ ಅವರ ವಿರುದ್ದ ತೊಡೆತೊಟ್ಟಿದ್ದ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಭಾರೀ ಮುಖಭಂಗವಾಗಿದೆ.

ಪ್ರಾರಂಭದಿಂದಲೇ ಮುನ್ನಡೆ:

ಬೆಳಗ್ಗೆ 8 ಗಂಟೆಗೆ ನಂಜನಗೂಡಿನ ಜೆಎಸ್‍ಎಸ್ ಕಾಲೇಜು ಹಾಗೂ ಗುಂಡ್ಲುಪೇಟೆಯ ಸೆಂಟ್‍ಜಾನ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಾರಂಭಿಕ ಮುನ್ನಡೆ ಕಾಯ್ದುಕೊಂಡರು.   ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ನಂಜನಗೂಡಿನಲ್ಲಿ ಕೈ ಹುರಿಯಾಳು ಕಳಲೆ ಕೇಶವಮೂರ್ತಿ, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ದ ಕೊನೆಯ ಸುತ್ತಿನವರೆಗೂ ಅಂತರವನ್ನು ಕಾಪಾಡಿಕೊಂಡರು.
ಪ್ರಾರಂಭದ ಸುತ್ತಿನಲ್ಲೇ 2000 ಮತಗಳ ಮುನ್ನಡೆ ಪಡೆದರೆ ತದನಂತರ ಪ್ರತಿ ಸುತ್ತಿನಲ್ಲೂ ಅಂತರವನ್ನು ಹೆಚ್ಚಿಸಿಕೊಂಡರು. 4ನೇ ಸುತ್ತಿನಲ್ಲಿ ಇದ್ದಕ್ಕಿದ್ದಂತೆ 10 ಸಾವಿರ ಮತಗಳ ಮುನ್ನಡೆ ಹೆಚ್ಚಿಸಿಕೊಂಡು ಅಂತಿಮ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು.

ವಿಶೇಷವೆಂದರೆ ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಪಡೆದರು. ಶ್ರೀನಿವಾಸ್ ಪ್ರಸಾದ್ ಅವರ ದಲಿತರ ಸ್ವಾಭಿಮಾನ, ಯಡಿಯೂರಪ್ಪನವರ ಜಾತಿ ಕ್ರೋಢೀಕರಣ ಕೈ ಹಿಡಿಯದೆ ಸಿದ್ದರಾಮಯ್ಯನವರ ಅಹಿಂದ ಫ್ಯಾಕ್ಟರ್ ಕೈ ಹಿಡಿದಿದೆ.

ಕೈ ಹಿಡಿದ ಪತಿಯ ಸಾವು:

ಮಲೆ ಮಹದೇಶ್ವರನ ನೆಲವೀಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದ್ದಾರೆ.   ಪ್ರಾರಂಭಿಕ ಸುತ್ತಿನಿಂದಲೇ ಗೀತಾ ಅವರು ಮುನ್ನಡೆ ಪಡೆದುಕೊಂಡು ಕೊನೆಯ 14ನೇ ಸುತ್ತಿಗೆ ವಿಜಯದ ಪತಾಕೆ ಹಾರಿಸಿದರು. ಸರಣಿ ಸೋಲನ್ನೇ ಅನುಕಂಪ ಮಾಡಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ಅವರನ್ನು ಮತದಾರ ಮೂರನೇ ಬಾರಿ ತಿರಸ್ಕರಿಸಿದ್ದಾನೆ.

ಪತಿಯ ಸಾವು, ಸಚಿವ ಡಿ.ಕೆ.ಶಿವಕುಮಾರ್ ಚಾಣಾಕ್ಷತೆ, ಕಾರ್ಯಕರ್ತರ ಒಗ್ಗಟ್ಟು ಇತ್ಯಾದಿ ಅಂಶಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿವೆ.
ಅಂತಿಮವಾಗಿ ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ವಿರುದ್ಧ 12,077 ಮತಗಳ ಅಂತರದಿಂದ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು.

ನಂಜನಗೂಡು ಮತಗಳ ವಿವರ : 

ಕಾಂಗ್ರೆಸ್ – ಕಳಲೆ ಕೇಶವಮೂರ್ತಿ- 63,486
ಬಿಜೆಪಿ -ವಿ.ಶ್ರೀನಿವಾಸ್ ಪ್ರಸಾದ್ -45926-
ಗೆಲುವಿನ ಅಂತರ 17,560

ಗುಂಡ್ಲುಪೇಟೆ ಮತಗಳ ವಿವರ : 
ಕಾಂಗ್ರೆಸ್-ಗೀತಾಮಹದೇವಪ್ರಸಾದ್-81,101
ಬಿಜೆಪಿ – ನಿರಂಜನ್‍ಕುಮಾರ್-69847
ಗೆಲುವಿನ ಅಂತರ- 11254

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

ಜನಾದೇಶಕ್ಕೆ ತಲೆಬಾಗುವೆ : ವಿ.ಶ್ರೀನಿವಾಸ್‍ಪ್ರಸಾದ್  : 

ನಂಜನಗೂಡು, ಏ.13- ಜನಾದೇಶಕ್ಕೆ ತಲೆಬಾಗುತ್ತೇನೆ ಎಂದು ಉಪ ಚುನಾವಣೆಯಲ್ಲಿ ಸೋಲನುಭವಿಸಿರುವ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‍ಪ್ರಸಾದ್ ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ 13 ಚುನಾವಣೆಗಳನ್ನು ಎದುರಿಸಿದ್ದೇನೆ. ಸೋಲು-ಗೆಲುವುಗಳನ್ನು ಕಂಡಿದ್ದೇನೆ. ಜನಾದೇಶಕ್ಕೆ ತಲೆಬಾಗುತ್ತೇನೆ. ದುರಹಂಕಾರ ಹಾಗೂ ಸ್ವಾಭಿಮಾನದ ನಡುವೆ ನಡೆದ ಚುನಾವಣೆಯಲ್ಲಿ ನನಗೆ ಸೋಲಾಗಿದೆ. ಜನರ ತೀರ್ಪನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.


ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ :

ನಂಜನಗೂಡು/ಗುಂಡ್ಲುಪೇಟೆ, ಏ.13- ಗುಂಡ್ಲುಪೇಟೆ-ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  ಮತ ಎಣಿಕೆ ಕೇಂದ್ರದ ಮುಂದೆ ಪಟಾಕಿ ಸಿಡಿಸಿ ಕುಣಿದು ಸಂಭ್ರಮಿಸಿದರು. ಸೆಂಟ್‍ಜಾನ್ಸ್ ಶಾಲೆಯಲ್ಲಿ ನಡೆದ ಗುಂಡ್ಲುಪೇಟೆ ಉಪ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದತ್ತ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಅಭ್ಯರ್ಥಿ ಗೀತಾಮಹದೇವಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆಲ್ಲಾ ಜೈಕಾರ ಕೂಗುತ್ತಿದ್ದರು. ಭಾರೀ ಸಂಖ್ಯೆಯಲ್ಲಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾಮಹದೇವಪ್ರಸಾದ್ ಅವರು ಮತ ಕೇಂದ್ರಕ್ಕೆ ಆಗಮಿಸಿರಲಿಲ್ಲ. ಅವರ ನಿವಾಸದಲ್ಲೇ ಕುಳಿತು ಟಿವಿ ವೀಕ್ಷಿಸುತ್ತಿದ್ದರು. ಪಕ್ಷದ ಏಜೆಂಟರು, ಬೆಂಬಲಿಗರು, ಕಾರ್ಯಕರ್ತರು ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದರು. ತಮಗೆ ಬಂದ ಮತಗಳು ಮುನ್ನಡೆಯಾಗುತ್ತಿದ್ದಂತೆ ಗೀತಾ ಮಹದೇವಪ್ರಸಾದ್ ಅವರು ಖುಷಿ ಪಡುತ್ತಿದ್ದದ್ದು ಕಂಡು ಬಂತು.  ಇತ್ತ ಜೆಎಸ್‍ಎಸ್ ಕಾಲೇಜಿನಲ್ಲಿ ನಂಜನಗೂಡು ಉಪಚುನಾವಣೆಯ ಮತ ಎಣಿಕೆ ಕಾರ್ಯ ಆರಂಭದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಕಳಲೆಕೇಶವಮೂರ್ತಿ ಭಾರೀ ಮುನ್ನಡೆ ಸಾಧಿಸುತ್ತಲೇ ಬರುತ್ತಿದ್ದರು.

ಮತ ಕೇಂದ್ರದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಆಗಮಿಸಿ ಜೈಕಾರದ ಘೋಷಣೆ ಕೂಗಿದರು. ಪಟಾಕಿಗಳ ಸದ್ದು ಕಿವಿಗಡಚಿಕ್ಕುವಂತಿತ್ತು. ಚುನಾವಣಾ ಆಯೋಗ ಮೆರವಣಿಗೆ ಇನ್ನಿತರೆ ಸಮಾರಂಭಗಳನ್ನು ನಿಷೇಧಿಸಿದ್ದರೂ ಕಾರ್ಯಕರ್ತರ ಉತ್ಸಾಹವನ್ನು ತಗ್ಗಿಸಲು ಸಾಧ್ಯವಾಗಿರಲಿಲ್ಲ. ಎರಡೂ ಕ್ಷೇತ್ರಗಳ ಮತ ಎಣಿಕೆ ಕೇಂದ್ರದ ಮುಂದೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಉಪಚುನಾವಣೆಯಲ್ಲಿ ರಿಸಲ್ಟ್ ಕುರಿತು ಯಡಿಯೂರಪ್ಪ ಹೇಳಿದ್ದೇನು ಗೊತ್ತೇ..!

ಬೆಂಗಳೂರು,ಏ.13- ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಮುಂದಿನ 2018ರ ವಿಧಾನಸಭೆಗೆ ದಿಕ್ಸೂಚಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಗೆಲ್ಲುವುದು ವಾಡಿಕೆಯಾಗಿದೆ. ಈ ಫಲಿತಾಂಶದಿಂದ ಎದುಗುಂದುವುದಿಲ್ಲ ಎಂದರು.   ಆರು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೆವು. ಬೇರೆ ಬೇರೆ ಕಾರಣಗಳಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರಬಹುದು. ಆದರೆ ಇದೇ ಫಲಿತಾಂಶ 2018ರ ಚುನಾವಣೆಯಲ್ಲಿ ಮರುಕಳಿಸುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವ ಅನುಮಾನ ಬೇಡ ಎಂದು ಹೇಳಿದರು.

ನಾವು ಎರಡು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿತ್ತು. ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‍ರಂತಹ ಹಿರಿಯ ನಾಯಕರನ್ನು ಯಾವ ಕಾರಣಕ್ಕಾಗಿ ಸೋಲಿಸಿದ್ದಾರೆ ಎಂಬುದನ್ನು ತಿಳಿದಿಲ್ಲ. ಪಕ್ಷದ ಸೋಲಿಗೆ ಪರಾಮರ್ಶೆ ನಡೆಸುವುದಾಗಿ ನುಡಿದರು.  ವೈಯಕ್ತಿಕವಾಗಿ ಪ್ರಸಾದ್ ಸೋಲು ನನಗೆ ತುಂಬ ನೋವು ತಂದಿದೆ. ಅವರಂತಹ ಹಿರಿಯರು ವಿಧಾನಸಭೆಯಲ್ಲಿ ಇರಬೇಕಿತ್ತು. ನಾವು ಈ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಅಂತಿಮವಾಗಿ ಮತದಾರರು ಕೊಟ್ಟ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದರು.


ಕಾಂಗ್ರೆಸ್ ಅಧಿಕಾರದ ಆರ್ಭಟದ ಮುಂದೆ ಸ್ವಲ್ಪ ಹಿನ್ನಡೆಯಾಗಿದೆ : ಆರ್.ಅಶೋಕ್

ಬೆಂಗಳೂರು, ಏ.13- ಕಾಂಗ್ರೆಸ್ ಅಧಿಕಾರದ ಆರ್ಭಟದ ಮುಂದೆ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಈ ಚುನಾವಣೆಯು ಮುಂದಿನ ವಿಧಾನಸಭೆ ಚುನಾವಣೆಗೆ ದುಕ್ಸೂಚಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದ್ದು, ಇದನ್ನು ಸ್ವೀಕರಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರದ ಬೆದರಿಕೆಯಿಂದ ಪಕ್ಷ ಹೆದರುವುದಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಹಾಗೂ ನಾನು ಈ ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಹೇಳಿಲ್ಲ ಎಂದು ಅವರು ಹೇಳಿದರು.


ಕರ್ನಾಟಕದಲ್ಲಿ ಬಿಜೆಪಿಯವರ ಆಟ ನಡೆಯುವುದಿಲ್ಲ : ಪರಮೇಶ್ವರ್

ತುಮಕೂರು,ಏ.13-ಕರ್ನಾಟಕದಲ್ಲಿ ಬಿಜೆಪಿಯವರ ಆಟ ನಡೆಯುವುದಿಲ್ಲ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಸಾಕ್ಷಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಆಗಮಿಸಿದ್ದ ಪರಮೇಶ್ವರ್ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆಯನ್ನೆ ಸಾಧಿಸಿರುವುದು ಹರ್ಷ ತಂದಿದೆ ಎಂದರು.
ಮುಂದಿನ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಮತದಾರರಿಗೆ ಬಿಜೆಪಿಯವರು ಎಷ್ಟೇ ಆಮಿಷವೊಡ್ಡಿದರು ಅದಕ್ಕೆ ಯಾರೂ ಸೊಪ್ಪು ಹಾಕಿಲ್ಲ. ನಾವು ನಿರೀಕ್ಷೆ ಮಾಡಿದಂತೆ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎಂದರು.
ವಿಜಯೋತ್ಸವ : ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದರಿಂದ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಮಕೃಷ್ಣಯ್ಯ , ನಗರ ಶಾಸಕ ರಫೀಖ್ ಅಹಮದ್, ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ ನೇತೃತ್ವದಲ್ಲಿ ನೂರಾರು ಮಂದಿ ನಗರದ ಟೌನ್‍ಹಾಲ್ ಬಳಿ ವಿಜಯೋತ್ಸವ ಆಚರಿಸಿದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin