ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

Nanjangud-Election

ಬೆಂಗಳೂರು,ಏ.6-ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿಯೆಂದೇ ಹೇಳಲಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ಬೀಳಲಿದ್ದು, ಇಂದು ಘಟಾನುಘಟಿ ನಾಯಕರು ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ.   ನೆತ್ತಿ ಸುಡುವ ಬಿಸಿಲು, ಧೂಳು ಯಾವುದನ್ನೂ ಲೆಕ್ಕಿಸದೆ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖರು ಕೊನೆಯ ಕ್ಷಣದಲ್ಲಿ ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಎರಡು ಕ್ಷೇತ್ರಗಳಲ್ಲಿ ಕಂಡುಬಂದಿತು.

ಶತಾಯಗತಾಯ ಜಿದ್ದಿಗೆ ಬಿದ್ದವರಂತೆ ಉಭಯ ಕ್ಷೇತ್ರಗಳಲ್ಲಿ ಬೀಡುಬಿಟ್ಟು, ಪ್ರಚಾರ ನಡೆಸುತ್ತಿರುವ ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ , ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ , ಸೋಮಣ್ಣ , ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಮತ್ತಿತರ ಪ್ರಮುಖರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತದಾರನ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವ್ ಪ್ರಸಾದ್ ಪರ ರೋಡ್ ಶೋ, ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಿದರು.   ಸಮಾವೇಶದಲ್ಲಿ ಸಿಎಂ ಸೇರಿದಂತೆ ಕಾಂಗ್ರೆಸ್‍ನ ಸಚಿವರು, ಶಾಸಕರು, ಸಂಸದರು, ಅನೇಕ ಮುಖಂಡರು ಭಾಗವಹಿಸಿ ಬಿಜೆಪಿ ವಿರುದ್ಧ ಹರಿಹಾಯ್ದರು. ಬೃಹತ್ ಸಮಾವೇಶದ ನಂತರ ಸಿಎಂ ಮತ್ತು ಸಚಿವರ ತಂಡ ಕೆಲ ಹಳ್ಳಿಗಳಿಗೆ ತೆರಳಿ ಮತ ಯಾಚನೆ ಮಾಡಿದರು.

ಬಿಜೆಪಿ ಕೂಡ ನಂಜನಗೂಡಿನಲ್ಲಿ ಮಾಜಿ ಸಚಿವ ಹಾಗೂ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಮತ ಯಾಚನೆಯಲ್ಲಿ ತೊಡಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಮುಖಂಡರಾದ ಶೋಭ ಕರಂದ್ಲಾಜೆ, ರೇಣುಕಾಚಾರ್ಯ, ವಿ.ಸೋಮಣ್ಣ , ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಈಶ್ವರಪ್ಪ ಸೇರಿದಂತೆ ಅನೇಕರು ಮತ ಯಾಚನೆ ಮಾಡಿ ಪ್ರಸಾದ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಜಾತಿ ಓಲೈಕೆ :

ಎರಡೂ ಕ್ಷೇತ್ರಗಳಲ್ಲಿ ಮುಖ್ಯವಾಗಿ ಜಾತಿ ಓಲೈಕೆ ಮೇಲೆಯೇ ಚುನಾವಣೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲಿಂಗಾಯಿತ ಮತಗಳನ್ನು ಸೆಳೆಯಲು ಬಿಜೆಪಿಯ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ತಮ್ಮದೇ ಆದ ರಣತಂತ್ರವನ್ನು ರೂಪಿಸಿದ್ದಾರೆ.   ನಂಜನಗೂಡಿನಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಉಸ್ತುವಾರಿ ವಹಿಸಿರುವ ಅವರು ವೀರಶೈವ ಮತಗಳನ್ನು ಸೆಳೆಯಲು ಸೂಚಿಸಿದ್ದಾರೆ. ಇನ್ನು ಪ್ರಸಾದ್ ಸಹಜವಾಗಿ ದಲಿತ ಮತಗಳ ಯಾಚನೆಯಲ್ಲಿ ತೊಡಗಿದ್ದರೆ ನಾಯಕ ಇತರೆ ಹಿಂದುಳಿದ ವರ್ಗಗಳ ಮತಗಳ ಬೇಟೆಗೆ ಶ್ರೀರಾಮುಲುಗೆ ಹೊಣೆಗಾರಿಕೆ ನೀಡಲಾಗಿದೆ.

ಕಾಂಗ್ರೆಸ್‍ನಲ್ಲಿ ದಲಿತ ಮತಗಳ ಬುಟ್ಟಿಗೆ ಶಾಮನೂರು ಶಿವಶಂಕರಪ್ಪ , ಎಸ್.ಎಸ್.ಮಲ್ಲಿಕಾರ್ಜುನ್, ಎಂ.ಬಿ.ಪಾಟೀಲ್, ದಲಿತ ಮತಗಳಿಗೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ , ಅಹಿಂದ ಮತಗಳಿಗೆ ಸ್ವತಃ ಸಿಎಂ ಅಖಾಡಕ್ಕಿಳಿದಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ವೀರಶೈವ ಮತಗಳು ಚದುರದಂತೆ ಯಡಿಯೂರಪ್ಪ ಹದ್ದಿನ ಕಣ್ಣಿಟ್ಟಿದ್ದಾರೆ. ಒಟ್ಟಿನಲ್ಲಿ ಉಪಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಹಣೆಬರಹವನ್ನು ನಿರ್ಧರಿಸುತ್ತಿರುವುದರಿಂದ ಮುಂದಿನ ಮೂರು ದಿನಗಳು ನಡೆಯುವ ರಾತ್ರಿ ಆಟದ ಮೇಲೆ ಎಲ್ಲವೂ ಅವಲಂಬಿತವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin